ಪರ್ಕಳದ ಮಹಾಲಿಂಗೇಶ್ವರನಿಗೆ ಪುನರ್​ ಪ್ರತಿಷ್ಠೆ...

Parkala 1
Published on

ಏ.27ರಿಂದ ಬ್ರಹ್ಮಕಲಶೋತ್ಸವ ಸಂಭ್ರಮ

ಮೇ 11ರ ವರೆಗೆ ಧಾರ್ಮಿಕ-ಸಾಂಸ್ಕೃತಿಕ ವೈಭವ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಕಳದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ-ಮಹಾಣಗಣಪತಿ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ.27ರಿಂದ ಮೇ 11ರ ವರೆಗೆ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ದೇವರ ಪುನರ್​ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ.

ತನ್ನಿಮಿತ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭರದಿಂದ ಸಿದ್ಧತೆಗಳೂ ಸಾಗಿದೆ.

ಹಸಿರು ಹೊರೆಕಾಣಿಕೆ ಮೆರವಣಿಗೆ

Parkala 2
ಏ.27ರಂದು ಸಂಜೆ 4 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದ ಬಳಿಯಿಂದ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಬರಲಿದೆ. ಸಂಜೆ 6 ಗಂಟೆಗೆ ಮಣಿಪಾಲದ ಮಹೇಶ ಭಂಡಾರಿ ಮತ್ತು ಬಳಗದಿಂದ ಭಕ್ತಿ, ಜಾನಪದ ಗೀತಾ ವೈಭವ ನಡೆಯಲಿದೆ. ಏ.28, 29 ಮತ್ತು 30ರಂದು ಬೆಳಗ್ಗೆ 9ರಿಂದ ವಿವಿಧ ವೈದಿಕ ವಿಧಿ-ವಿಧಾನಗಳು ನಡೆಯಲಿದೆ. ಸಂಜೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸುಧರ್ಮ ಸಭೆ

Parkala 3
ಮೇ 1ರಂದು ಸಂಜೆ 5ಕ್ಕೆ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸುಧರ್ಮ ಸಭೆ ಉದ್ಘಾಟಿಸಲಿದ್ದಾರೆ. ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪಾಲ್ಗೊಳ್ಳಲಿದ್ದಾರೆ. ಮೇ 2ರಂದು ಸಂಜೆ 5:30ಕ್ಕೆ ಶ್ರೀಕ್ಷೇತ್ರ ಕಲ್ಲಂಗಳದ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಕರಸೇವಾಭಿನಂದನಂ ಕಾರ್ಯಕ್ರಮ ಉದ್ಘಾಟಿಸುವರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆ ವಹಿಸುವರು. ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಮಾತೃ ಸಂಗಮ

Parkala 4
ಮೇ 3ರಂದು ಸಂಜೆ 5:30ಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಮಾತೃ ಸಂಗಮ ಕಾರ್ಯಕ್ರಮ ಉದ್ಘಾಟಿಸುವರು. ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ ಅಧ್ಯಕ್ಷತೆ ವಹಿಸುವರು. ಡಾ. ಅಪರ್ಣಾ ಶ್ಯಾನುಭಾಗ ದಿಕ್ಸೂಚಿ ಭಾಷಣ ಮಾಡುವರು. ಮೇ 4ರಂದು ಸಂಜೆ 5:30ಕ್ಕೆ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ಆಶೀರ್ವಚನ ನೀಡುವರು. ದೇವಳ ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಬಿ.ಜಯರಾಜ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಮೇ 5ರಂದು ಸಂಜೆ 5ಕ್ಕೆ ಧರ್ಮದರ್ಶಿ  ಸಮಾವೇಶ ಜರುಗಲಿದೆ. ಮೇ 6ರಂದು ಭಜನಾ ಏಕಾಹ, ಮೇ 7ರಂದು ಧ್ವಜಾರೋಹಣ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ, ಮೇ 8ರಂದು ಬೈಗಿನ ಬಲಿ ನಡೆಯಲಿದೆ.

ಮೇ 9ರಂದು ರಾತ್ರಿ 8ಕ್ಕೆ ಮಹಾನ್​ ರಥೋತ್ಸವ, ಮೇ 10ರಂದು ಭಕ್ತರಿಂದ ತುಲಾಭಾರ ಸೇವೆ, ರಾತ್ರಿ ವ್ಯಾಘ್ರ ಚಾಮುಂಡಿ ಕೋಲ, ಮೇ 11ರಂದು ಮಹಾ ಸಂಪ್ರೋಕ್ಷಣೆ, ರಾತ್ರಿ ಗೋಂದುಲು ಮಾರಿ ಕಾರ್ಯಕ್ರಮ ನಡೆಯಲಿದೆ.

ಭಕ್ತರ ಇಷ್ಟಾರ್ಥ ಈಡೇರಿಸುವ ತಪೋಭೂಮಿ

ಖರಾಸುರ ಎಂಬ ರಾಕ್ಷಸನು ತನ್ನ ಇಷ್ಟಾರ್ಥ ಸಿದ್ಧಿಗಾಗಿ ಋಷಿಗಳ ತಪೋಭೂಮಿಯಂತಿದ್ದ ಈ ಪ್ರದೇಶದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಎಂಬ ಐತಿಹ್ಯವಿದೆ. ಸ್ಥಳ ಪುರಾಣದಲ್ಲೂ ಇದೇ ಉಲ್ಲೇಖವಿದೆ. ಪರಿಸರದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಈ ದೇಗುಲವು ಸಾವಿರ ವರ್ಷಕ್ಕಿಂತಲೂ ಹೆಚ್ಚು ಪುರಾತನದ್ದೆಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಭಕ್ತಜನರ ನೆರವೇ ದೇಗುಲದ ಪ್ರಧಾನ ಆಸ್ತಿಯಾಗಿದ್ದು, ಕಾಲಕಾಲಕ್ಕೆ ಅಂಗೋಪಾಂಗಗಳು ಜೀಣೋರ್ದ್ಧಾರಗೊಳ್ಳುತ್ತ ಬಂದಿದೆ. ಒಂದು ಕಾಲದಲ್ಲಿ ತೀರಾ ಜೀರ್ಣಾವಸ್ಥೆಯಲ್ಲಿದ್ದ ದೇಗುಲವನ್ನು ಆಡಳಿತ ಮಂಡಳಿಯ ಮೊಕ್ತೇಸರ ದಿ. ಗುರುರಾಜ ಯೋಯಿಸ ಅವರ ಪ್ರಯತ್ನದಲ್ಲಿ ಬೃಹದ್ಗಾತ್ರದಲ್ಲಿ ಬೆಳೆದು ನಿಂತಿದೆ. ಕ್ಷೇತ್ರ ಸ್ವಾಮಿಯಾದ ಮಹಾಲಿಂಗೇಶ್ವರ-ಮಹಾಗಣಪತಿ ದೇವರು, ಮಹಿಷಮರ್ದಿನಿ ಅಮ್ಮನವರ ಸನ್ನಿಧಿ ಮತ್ತು ಪರಿವಾರ ದೇವರುಗಳು ಭಕ್ತರ ಅಭೀಷ್ಟಗಳನ್ನೆಲ್ಲ ಈಡೇರಿಸುತ್ತಿದ್ದಾರೆ ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ಜಯರಾಜ ಹೆಗ್ಡೆ.

ಪಾಡಿಗಾರು ಶ್ರೀನಿವಾಸ ತಂತ್ರಿಗಳ ಮಾರ್ಗದರ್ಶನ, ಸ್ಥಪತಿ ಅವಧಾನಿ ಸುಬ್ರಹ್ಮಣ್ಯ ಭಟ್ಟರ ವಾಸ್ತು ನಿರ್ದೇಶನ, ಎಲ್ಲೂರು ವಿಷ್ಣುಮೂರ್ತಿ ಭಟ್​ ಮತ್ತು ವಿಶ್ವನಾಥ ಭಟ್​ ನಿರ್ಮಾಣ, ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿ, ಗ್ರಾಮಸ್ಥರು, ಊರು-ಪರವೂರಿನ ಸದ್ಭಕ್ತರ ಸಹಕಾರದಿಂದ ದೇಗುಲ ಜೀರ್ಣೋದ್ಧಾರ ಆಗಿದೆ. ಭವ್ಯವಾದ ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ಗಣಪತಿ ಗುಡಿ, ಅಯ್ಯಪ್ಪ ಗುಡಿ, ಹುಲಿ ಚಾಮುಂಡಿ ಗುಡಿ ನಿರ್ಮಾಣಗೊಂಡಿದೆ. ದೇವರ ಪುನರ್​ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವದಲ್ಲಿ ಭಕ್ತ ಜನರೆಲ್ಲ ಪಾಲ್ಗೊಳ್ಳಬೇಕೆನ್ನುವುದು ನಮ್ಮೆಲ್ಲರ ಅಪೇಕ್ಷೆ. | ಶ್ರೀನಿವಾಸ ಉಪಾಧ್ಯ. ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net