

ಉಡುಪಿ: ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಬುಧವಾರ ಪ್ರತಿಭಟನೆಗೆ ಕರೆ ನೀಡಿದ್ದು, ಬೆಳಗ್ಗೆಯೇ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧಿಕಾರಿಗಳು ಕಾಂಕ್ರೀಟ್ ಮೇಲೆ ಹಾಕಿದ್ದ ಡಾಂಬರು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ರದ್ದುಗೊಳಿಸಲಾಯಿತು.
ನಗರಸಭೆಯ ಪೌರಾಯುಕ್ತ ರಾಯಪ್ಪ ಸ್ಥಳಕ್ಕೆ ಆಗಮಿಸಿ,ತಾತ್ಕಲಿಕ ತೇಪೆಹಾಕುವ ಕಾಮಗಾರಿಗೆ ವ್ಯವಸ್ಥೆಗೊಳಿಸಿದರು. ಮಳೆಗಾಲ ಮುಗಿದ ಬಳಿಕ ಮರು ಡಾಂಬರೀಕರಣಗೊಳಿಸುವ ಭರವಸೆ ನೀಡಿದರು.
ಈ ಬಗ್ಗೆ ಮಾತನಾಡಿದ ನಿತ್ಯಾನಂದ ಒಳಕಾಡು, ಬೇಸಿಗೆಯಲ್ಲಿ ಈ ರಸ್ತೆಯು ಡಾಂಬರೀಕರಣ ಮಾಡಲಾಗಿತ್ತು. ಕಳಪೆಮಟ್ಟದ ಕಾಮಗಾರಿಯಿಂದಾಗಿ ರಸ್ತೆಗಳಲ್ಲಿ ಹೊಂಡಗಳು ಬಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಯಿತು. ಈ ರಸ್ತೆಯು ಅಪಘಾತ ವಲಯವಾಗಿ ಮಾರ್ಪಟ್ಟಿತ್ತು. ಹೀಗಾಗಿ ಪ್ರತಿಭಟನೆಗೆ ಮುಂದಾಗಿದ್ದೆವು. ನಗರಸಭೆ ಪರ್ಯಾಯ ಮಹೋತ್ಸವದ ಅನುದಾನವಾಗಿ ಈ ರಸ್ತೆಗೆ 35 ಲಕ್ಷ ಹಣ ಮಂಜೂರು ಮಾಡಲಾಗಿತ್ತು. ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ, ಕಾಂಕ್ರೀಟ್ ರಸ್ತೆ ಮೇಲೆ ತೇಪೆ ಹಚ್ಚಿಸಿದ್ದರಿಂದ ಸಮಸ್ಯೆ ಎದುರಾಗಿದೆ ಎಂದರು.