

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದ ಪ್ರಮುಖ ರಸ್ತೆ ಹಾಗೂ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ರಸ್ತೆ ಕಿತ್ತುಹೋಗಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ನಗರದ ಬ್ರಹ್ಮಗಿರಿ ಸರ್ಕಲ್ನಿಂದ ಅಜ್ಜರಕಾಡು ಸಮೀಪದ ಜಿಲ್ಲಾಸ್ಪತ್ರೆಯವರೆಗೂ ರಸ್ತೆಯಲ್ಲಿ ಹೊಂಡಗಳು ಬಿದ್ದು, ಬೈಕ್ ಹಾಗೂ ಸಣ್ಣ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ.
ಮೂರು ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆ ಇದಾಗಿದ್ದು, ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಡಾಂಬರ್ನ ಮೇಲ್ಪದರು ಸಂಪೂರ್ಣ ಕಿತ್ತು ಹೋಗಿದ್ದು, ಕೆಳಭಾಗದ ರಸ್ತೆ ಗೋಚರಿಸುತ್ತಲಿದೆ. ಇದು ಕಳಪೆ ಕಾಮಗಾರಿ ಎಂದು ಜನರು ಆರೋಪಿಸತೊಡಗಿದ್ದಾರೆ.
ಬ್ರಹ್ಮಗಿರಿ ಸರ್ಕಲ್ ಬಳಿ ರಸ್ತೆಗೆ ಹಾಕಿದ್ದ ಜಲ್ಲಿ ಮಿಶ್ರಣ ಕಿತ್ತುಹೋಗಿದ್ದರಿಂದ ಅವು ರಸ್ತೆಯಲ್ಲಿಯೇ ಹರಡಿಕೊಂಡಿದೆ. ಇದರ ಮೇಲೆಯೇ ಸಂಚರಿಸುವ ಅನಿವಾರ್ಯತೆ ಇರುವುದರಿಂದ ಅನೇಕ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಳ್ಳುವಂತಾಗಿದೆ. ಜಿಲ್ಲಾಸ್ಪತ್ರೆಯ ಮಾರ್ಗವೂ ಆಗಿದ್ದರಿಂದ ಆಗಾಗ ಆಂಬುಲೆನ್ಸ್ ಸಹ ಹರಡಿಕೊಂಡಿರುವ ಜೆಲ್ಲಿ ಮಿಶ್ರಣದ ಮೇಲೇಯೇ ಸಾಗುವುದರಿಂದ ಅಪಾಯ ಸಂಭವಿಸಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ರಸ್ತೆ ರಿಪೇರಿ ಮಾಡುವಂತೆ ಒತ್ತಾಯಿಸಿದ್ದಾರೆ.
ಮಳೆಗಾಲ ಆರಂಭವಾಗುವ ಮೊದಲು ಡಾಂಬರೀಕರಣ ಮಾಡಿದ್ದ ರಸ್ತೆ ಇದಾಗಿತ್ತು. ಇತ್ತೀಚೆಗೆ ಉಡುಪಿಯಲ್ಲಿ ನಿರಂತರ ಮಳೆ ಬರುತ್ತಿದ್ದು, ಈ ರಸ್ತೆಯ ಗುಣಮಟ್ಟ ಹೇಗಿದೆ ಎನ್ನುವುದು ತಿಳಿಯುತ್ತಿದೆ. ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುವ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಿತ್ಯಾನಂದ ಒಳಕಾಡು.ಸಮಾಜಸೇವಕ, ನಗರಸಭಾ ಮಾಜಿ ಸದಸ್ಯ. ಉಡುಪಿ