ಸಹಕಾರ ಕ್ಷೇತ್ರ ಪ್ರವೇಶಿಸಿದ ಸಚ್ಚಿನ್: ಮೊದಲ ಪ್ರಯತ್ನದಲ್ಲೇ ಸಚಿವ ಸಿಆರ್‌ಎಸ್ ಪುತ್ರನಿಗೆ ಗೆಲುವು

Brahmadevarahalli Society Election Mandya
Published on

ನಾಗಮಂಗಲ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಸಚ್ಚಿನ್ ತಾಲೂಕಿನ ಬ್ರಹ್ಮದೇವರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾಯಿತರಾಗುವ ಮೂಲಕ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಇದರೊಂದಿಗೆ ರಾಜಕೀಯದ ಭವಿಷ್ಯಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮಾತ್ರವಲ್ಲದೆ ಸೊಸೈಟಿ ಆಡಳಿತ ಚುಕ್ಕಾಣಿ ಕಾಂಗ್ರೆಸ್ ತೆಕ್ಕೆ ಸೇರಿದೆ.

ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಜವರಪ್ಪ ಮತ್ತು ಧನಂಜಯ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 10 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದರು.

ಸಾಲಗಾರರಲ್ಲದ ಕ್ಷೇತ್ರದ ಒಟ್ಟು 444 ಮತದಾರರ ಪೈಕಿ 426 ಜನರು ತಮ್ಮ ಹಕ್ಕು ಚಲಾಯಿಸಿದ್ದರು. ಸಚಿವ ಚಲುವರಾಯಸ್ವಾಮಿ ಪುತ್ರ ಸಚ್ಚಿನ್ 260 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಜೆಡಿಎಸ್ ಬೆಂಬಲಿತ ರಾಮು 160 ಮತ ಪಡೆದು ಪರಾಭವಗೊಂಡರು. 3 ಮತಗಳು ತಿರಸ್ಕೃತಗೊಂಡಿದ್ದವು. ಅಂತೆಯೇ ಸಾಲಗಾರರ ಕ್ಷೇತ್ರದ 9 ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಒಟ್ಟು 21 ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಒಟ್ಟು 789 ಮತದಾರರ ಪೈಕಿ 710 ಜನರು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಕೆ.ಜೆ.ಉಮೇಶ(519), ಜೆ.ಪಿ.ಉಮೇಶ(484), ಬಿ.ಎಂ.ಪ್ರಕಾಶ್(410), ರಜನಿ(432), ಟಿ.ಎಚ್.ರಾಜು(328), ಶಿವಣ್ಣ(414), ಎನ್.ಡಿ.ಸಣ್ಣದೇವೇಗೌಡ(384), ಸವಿತಾ(424) ಹಾಗೂ ಹನುಮಂತೇಗೌಡ(386) ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಜೆಡಿಎಸ್‌ಗೆ ತೀವ್ರ ಹಿನ್ನಡೆಯುಂಟಾಯಿತು.

ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಘದ ಮುಂಭಾಗದ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಸಚ್ಚಿನ್ ಅವರನ್ನು ಹೊತ್ತು ಮೆರವಣಿಗೆ ಮಾಡಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಕಳಂಕ ಬಾರದಂತೆ ಕೆಲಸ ಮಾಡುತ್ತೇನೆ

ಗೆಲುವಿನ ನಂತರ ಮಾತನಾಡಿದ ಸಚ್ಚಿನ್ ಚಲುವರಾಯಸ್ವಾಮಿ, ಸೊಸೈಟಿ ವ್ಯಾಪ್ತಿಯ ಮತದಾರರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಹೋರಾಟ, ಬೆಂಬಲದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದೆ. ಇದು ಜನರ ಗೆಲುವು. ಅವರ ನಂಬಿಕೆ, ವಿಶ್ವಾಸಕ್ಕೆ ಕಳಂಕ ಬಾರದಂತೆ ಕೆಲಸ ಮಾಡುತ್ತೇನೆ. ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.

ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ರವಿ, ಉದಯಕಿರಣ್, ಲೋಕೇಶ್, ಮಂಜುನಾಥಗೌಡ, ಎಂ.ಪ್ರಸನ್ನ, ದಾಸೇಗೌಡ, ಶಶಿಗೌಡ, ಸಂಘದ ಸಿಇಒ ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net