

ಭಟ್ಕಳ: ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮ ರಥೋತ್ಸವವು ಭಾನುವಾರ ವೈಭವದಿಂದ ಜರುಗಿತು.
ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಗಳು ನಡೆದವು. ಸಾವಿರಾರು ಭಕ್ತರು ರಥಕಾಣಿಕೆ ಶ್ರೀದೇವರಿಗೆ ಅರ್ಪಿಸಿದರು. ಸಂಜೆ 5ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನಾ ವಾಡಿಕೆಯಂತೆ ಶಿರ್ಕಿನ ಅನ್ಸಾರಿ, ಶಾಬಂದ್ರಿ ಮನೆ ಮತ್ತು ಜೈನ ಮನೆತನಕ್ಕೆ ಆಮಂತ್ರಣ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಎದುರಿನ ಹೂವಿನ ಪೇಟೆಯಿಂದ ಮಾರಿಗುಡಿಯ ಮೂಲಕ ಜನತಾ ಬ್ಯಾಂಕಿನ ಎದುರಿನಿಂದ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು.
ರಥೋತ್ಸವದಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಈ ಬಾರಿ ಡೊಳ್ಳು ಕುಣಿತ, ರೇಡಿಯೋ ಕಲಾವಿದ ಉದಯಪ್ರಭು ತಂಡದಿಂದ ಭಜನೆ, ವಾದ್ಯಗೋಷ್ಠಿ ಜನಮನಸೆಳೆದವು. ಸಚಿವ ಮಂಕಾಳ ವೈದ್ಯ, ಪುತ್ರಿ ಬೀನಾ ವೈದ್ಯ ಹನುಮಂತನ ದರ್ಶನ ಪಡೆದರು. ಮಾಜಿ ಶಾಸಕರಾದ ಸುನೀಲ ನಾಯ್ಕ, ಜೆಡಿ ನಾಯ್ಕ, ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಅಧ್ಯಕ್ಷ ವಿಠಲ್ ನಾಯ್ಕ, ಬಿಜೆಪಿ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಇತರರು ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಶ್ರೀಧರ ಮೊಗೇರ ಇದ್ದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಂಜೀಂ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿಯೂ ರಥದ ಮುಂದೆ ಸಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.