ಬೆಳ್ತಂಗಡಿ: ಬಂದಾರು ಗ್ರಾಮದ ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಲ್ಲಿ ಜ.7ರಿಂದ 12ರವರೆಗೆ ಶ್ರೀ ಸಿದ್ಧಿವಿನಾಯಕ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಗೌಡ ನಾಗಂದೋಡಿ ಹೇಳಿದರು.
ಸೋಮವಾರ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 13 ವರ್ಷಗಳ ಹಿಂದೆ ಮೊದಲ ಬ್ರಹ್ಮಕಲಶೋತ್ಸವ ನಡೆದಿದ್ದು ಈ ಬಾರಿ ದೇವಸ್ಥಾನದ ಸುತ್ತು ಪರಿಧಿ ಇಂಟರ್‌ಲಾಕ್, 40 ಲಕ್ಷ ರೂ. ವೆಚ್ಚದ ಸಭಾಭವನ ಮೊದಲಾದ ಅಭಿವೃದ್ಧಿ ಕಾರ್ಯಗಳು ಆಗಿವೆ. ಬ್ರಹ್ಮಕಲಶೋತ್ಸವದ ಯಶಸ್ವಿಗೆ 23 ಉಪ ಸಮಿತಿ ರಚನೆ ಮಾಡಲಾಗಿದೆ ಎಂದರು.
ಜ.7ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಸಂಜೆ ಪೆರ್ಲ ಬೈಪಾಡಿ ದೇವಸ್ಥಾನದ ಪರಿಸರದವರಿಂದ ಹಸಿರುವಾಣಿ ಸಮರ್ಪಣೆ, ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ರಾತ್ರಿ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ, 8ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಬಂದಾರು, ಮೊಗ್ರು, ಕಣಿಯೂರು ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಭಜನೆ, ಸಂಜೆ ಸ್ಥಳೀಯ ಬಜಿಲ ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ರಾತ್ರಿ ಕಲ್ಲಡ್ಕ ವಿಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದರು.
9ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ಬಜಿಲ, ಅದೂರುಪೇರಲ್, ಕೊಯ್ಯೂರು, ಮಲೆಬೆಟ್ಟು, ಕಳಿಯ, ನ್ಯಾಯತರ್ಪು, ನಾಳ ಭಕ್ತರಿಂದ ಹಸಿರು ವಾಣಿ ಸಮರ್ಪಣೆ, ಭಜನೆ, ಸಂಜೆ ಪೆರ್ಲ ಬೈಪಾಡಿ ಸ.ಹಿ.ಪ್ರಾ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ರಿಂದ ಧಾರ್ಮಿಕ ಸಭೆ ನಂತರ ಮಂಜೇಶ್ವರ ಐಸಿರಿ ಶಾರದಾ ಆರ್ಟ್ಸ್ ತಂಡದಿಂದ ನಾಟಕ ನಡೆಯಲಿದೆ ಎಂದರು.
10ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ ನಡೆಯಲಿದ್ದು ಉಜಿರೆ, ಬೆಳಾಲು, ಮಾಯ, ಕೊಲ್ಪಾಡಿ ಭಕ್ತರಿಂದ ಹಸಿರುವಾಣಿ ಸಮರ್ಪಣೆ, ಭಜನೆ, ಸಂಜೆ ಕುಂಟಾಲಪಲ್ಕೆ ಅಂಗನವಾಡಿ, ಹಿ.ಪ್ರಾ.ಶಾಲಾ ಮಕ್ಕಳಿಂದ ವೈವಿಧ್ಯ ಕಾರ್ಯಕ್ರಮ, ರಾತ್ರಿ ವಿದುಷಿ ಪ್ರತೀಕ್ಷಾ ಆಚಾರ್ಯ, ವಿದುಷಿ ಅಮೃತ ಸಂದೀಪ್, ವಿದುಷಿ ಪೂಜಾ ಹಾಗೂ ಶಿಷ್ಯರಿಂದ ಭರತ ನಾಟ್ಯ, ನಂತರ ಜ್ಞಾನ ಗುರುರಾಜ್ ಅವರಿಂದ ಭಕ್ತಿ ಗಾಯನ, ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲಾ ಪಟ್ಲ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಶ್ರೀರಾಮಾಶ್ವಮೇಧ ನಡೆಯಲಿದೆ ಎಂದರು.
11ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ ಭಜನೆ, ಮಧ್ಯಾಹ್ನ ಕರ್ನಾಟಕ ಗಮಕ ಕಲಾ ಪರಿಷತ್ ಬೆಳ್ತಂಗಡಿ ಅವರಿಂದ ಗಮಕ ವೈಭವ, ಸಂಜೆ ಪೆರ್ಲ ಬೈಪಾಡಿ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ರಾತ್ರಿ 7ರಿಂದ ಸಭಾ ಕಾರ್ಯಕ್ರಮ, ಬಳಿಕ ಬೆಳ್ತಂಗಡಿ ವಾಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಾಣಿ ಕಲಾ ವೈಭವ ನಡೆಯಲಿದೆ ಎಂದರು.
12ರಂದು ಬೆಳಗ್ಗೆ 108 ತೆಂಗಿನಕಾಯಿ ಗಣಹೋಮ, ಪ್ರತಿಷ್ಠಾಪನೆ, ಶ್ರೀ ಸಿದ್ಧಿವಿನಾಯಕ ದೇವರ ಪುನರ್ ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿಷೇಕ, ಸಂಜೆ ನೃತ್ಯ ಭಜನೆ, ರಾತ್ರಿ ಸಭಾ ಕಾರ್ಯಕ್ರಮ, ರಂಗಪೂಜೆ ನಂತರ ಹಿರಿಯಡ್ಕ ಮೇಳದವರಿಂದ ಯಕ್ಷಗಾನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಬಿ.ಬಾಲಕೃಷ್ಣ ಪೂಜಾರಿ ಬಜೆಗುತ್ತು, ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಕಾರ್ಯದರ್ಶಿ ಸತೀಶ್ ಗೌಡ, ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು ಉಪಸ್ಥಿತರಿದ್ದರು.