ಕೃಷಿ ಉತ್ಪನ್ನಗಳ ಬ್ರ್ಯಾಡಿಂಗ್

mysore
Published on

ಮೈಸೂರು: ಭೌಗೋಳಿಕ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳ ಬ್ರ್ಯಾಡಿಂಗ್ ಮಾಡಲಾಗುತ್ತಿದೆ. ಈ ಮೂಲಕ ಇವುಗಳ ಖರೀದಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ಅಂಗಡಿ ತಿಳಿಸಿದರು


ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಮೈಸೂರು ಪತ್ರಿಕಾಲಯದಲ್ಲಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರಿನ ಪ್ರಮುಖ ಹೋಟೆಲ್‌ಗಳಲ್ಲಿ ಇವುಗಳು ಲಭ್ಯ ಇರುವಂತಹ ವ್ಯವಸ್ಥೆ ಮಾಡಲಾಗುವುದು. ಇದರಿಂದ ಹೋಟೆಲ್ ಬಂದ 10 ಗ್ರಾಹಕರಲ್ಲಿ 3 ಜನರಾದರೂ ಇವುಗಳನ್ನು ಕೊಂಡುಕೊಳ್ಳಬಹುದು. ಜತೆಗೆ, ಪ್ರವಾಸಿ ತಾಣಗಳಲ್ಲೂ ಇವುಗಳ ಕುರಿತು ಪ್ರಚಾರ, ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದರು.


ಈ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಮುಖ್ಯವಾಗಿದೆ. ಅದಕ್ಕಾಗಿ ಈ ರೀತಿ ಕಾರ್ಯತಂತ್ರ ಬಳಸಲಾಗುತ್ತಿದೆ. ಇದರೊಂದಿಗೆ ಸಾಮಾಜಿಕ ಜಾಲ ತಾಣಗಳಲ್ಲೂ ಪ್ರಚಾರ, ಜಾಹೀರಾತು ಮಾಡಲಾಗುತ್ತಿದೆ. ಇದರ ಲಾಭ ರೈತರಿಗೆ ಆಗಲಿದೆ ಎಂದರು.

ಮಧ್ಯವರ್ತಿಗಳಿಗೆ ಅವಕಾಶ ಇಲ್ಲ


ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 8-10 ಹೆಕ್ಟೇರ್ ಪ್ರದೇಶ ವಿಸ್ತರಣೆಯಾಗಿದೆ. ಅಂದಾಜು 30 ಸಾವಿರ ರೈತರು ತೋಟಗಾರಿಕೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ಮಾಹಿತಿ ನೀಡಿದರು.


ತೋಟಗಾರಿಕೆ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ. ಹನಿ ನೀರಾವರಿ, ಸಬ್ಸಿಡಿ, ಸಹಾಯಧನ, ಉಪಕರಣ ಖರೀದಿ ಸೇರಿದಂತೆ ವಿವಿಧ ಸೌಲಭ್ಯದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ರೈತರಿಗೆ ಜೇನಿನ ಸಹಿ:


ಜೇನುಕೃಷಿಗೂ ರೈತರಿಂದ ಒಲವು ವ್ಯಕ್ತವಾಗಿದೆ. ಗ್ರಾಹಕರು ಸಹ ಶುದ್ಧ ಜೇನುತುಪ್ಪ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ ಎಂದರು. ಎಚ್.ಡಿ.ಕೋಟೆ, ಹುಣಸೂರು, ತಿ.ನರಸೀಪುರ ಭಾಗದಲ್ಲಿ ಜೇನು ಕೃಷಿ ಹೆಚ್ಚಾಗಿ ನಡೆಯುತ್ತಿದೆ. ರಸಗೊಬ್ಬರ ಬಳಕೆಯಿಂದ ಜೇನುಹುಳುಗಳ ಸಂಖ್ಯೆ ಕಡಿಮೆಯಾಗಿದೆ. ಇದು ರೈತರ ಗಮನಕ್ಕೂ ಬಂದಿದೆ. ಸಾವಯವ ಕೃಷಿಯೊಂದಿಗೆ ಜೇನು ಕೃಷಿ ಉಪ ಕಸುಬು ಆಗಿದೆ ಎಂದರು.

ಕುಪ್ಪಣ್ಣ ಪಾರ್ಕ್‌ದಲ್ಲಿ ವಿವಿಧ ಚಟುವಟಿಕೆ


ದಸರಾ ಸಂದರ್ಭದಲ್ಲಿ ಫಲ ಪುಷ್ಪ ಪ್ರದರ್ಶನಕ್ಕೆ ಮಾತ್ರ ಬಳಕೆ ಆಗುವ ನಗರದ ನಿಶಾದ್‌ಬಾಗ್(ಕುಪ್ಪಣ್ಣ ಪಾರ್ಕ್)ದಲ್ಲಿ ವಿವಿಧ ಚಟುವಟಿಕೆ ನಡೆಸಲು ಕ್ರಮ ವಹಿಸಲಾಗಿದೆ. ವರ್ಷದಲ್ಲಿ ನಾಲ್ಕೈದು ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕಾಗಿ ಬಾಡಿಗೆ ಆಧಾರದ ಮೇಲೆ ಖಾಸಗಿ ಸಂಸ್ಥೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ತಾಳೆ ಕೃಷಿಯಿಂದ ನಷ್ಟ ಇಲ್ಲ


ನಷ್ಟ ರಹಿತ, ಆದಾಯ ಬೆಳೆಯಾದ ತಾಳೆ ಕೃಷಿಯಿಂದ ರೈತರು ಹೆಚ್ಚು ಲಾಭ ಗಳಿಸಬಹುದು. ಭವಿಷ್ಯದಲ್ಲಿ ಅಡುಗೆ ಎಣ್ಣೆ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಇದಕ್ಕೆ ಪರ್ಯಾಯ ಕ್ರಮವಾಗಿ ತಾಳೆ ಎಣ್ಣೆ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ. ತಾಳೆ ಕೃಷಿಯ ನಿರ್ವಹಣೆ ಸುಲಭ, ರೋಗರುಜಿನದ ಕಾಟವೂ ಇಲ್ಲ. ಗೊಬ್ಬರ-ನೀರು ಬಿಟ್ಟರೆ ಬೇರೆ ಏನು ಬೇಡ. ಕಳ್ಳತನ ಭಯವೂ ಇಲ್ಲ. ಇದನ್ನು ಖರೀದಿ ಮಾಡಲು ಕಂಪನಿಗಳು ಸಹ ಮುಗಿಬೀಳುತ್ತವೆ. ಹೀಗಾಗಿ, ಈ ಕೃಷಿಯಲ್ಲಿ ನಷ್ಟ ಕಡಿಮೆ. ಜಿಲ್ಲೆಯಲ್ಲಿ 250 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿದ್ದು, ಹೊಸದಾಗಿ 25 ಹೆಕ್ಟರ್ ಕ್ಷೇತ್ರ ವಿಸ್ತರಣೆಯಾಗಿದೆ ಎಂದರು.

ಡ್ರ್ಯಾಗನ್ ಹಣ್ಣಿಗೆ ಬೇಡಿಕೆ


ಡ್ರ್ಯಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಮಾರುಕಟ್ಟೆ ದರ ಪ್ರತಿ ಕೆಜಿಗೆ 130ರಿಂದ 150 ರೂ. ಇದೆ. ರೈತರಿಗೆ ಕಡಿಮೆ ಎಂದರೂ ಪ್ರತಿ ಕೆಜಿಗೆ 70ಕ್ಕಿಂತ ಹೆಚ್ಚಿನ ಬೆಲೆ ಸಿಗಲಿದೆ. ಹಳದಿಗಿಂತ ಬಿಳಿ, ಕೆಂಪು ಬಣ್ಣದ ಡ್ರಾೃಗನ್ ಹಣ್ಣು ಹೆಚ್ಚು ಮಾರಾಟವಾಗುತ್ತದೆ. ಹುಣಸೂರು, ನಂಜನಗೂಡು, ಎಚ್.ಡಿ.ಕೋಟೆಯಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ತರಕಾರಿ ಅನ್ಯ ರಾಜ್ಯಕ್ಕೆ


ಜಿಲ್ಲೆಯಲ್ಲಿ ಬೆಳೆದ ಶೇ.60ರಷ್ಟು ತರಕಾರಿ, ಹಣ್ಣು ನೆರೆ ರಾಜ್ಯಗಳಿಗೆ ಪೂರೈಕೆಯಾಗಲಿದ್ದು, ತಮಿಳುನಾಡು, ಮಹಾರಾಷ್ಟ್ರಕ್ಕಿಂತ ಕೇರಳಕ್ಕೆ ಹೆಚ್ಚು ಸರಬರಾಜು ಆಗುತ್ತಿದೆ. ಇದರಿಂದ ಇಲ್ಲಿಯ ತರಕಾರಿ, ಹಣ್ಣುಗಳಿಗೆ ಬೇಡಿಕೆ ಅಧಿಕ. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಬರಗಾಲದ ಸಮಸ್ಯೆ ಇಲ್ಲ


ಬರಗಾಲದಿಂದ ಕೃಷಿ ಬೆಳೆಗೆ ಹಾನಿಯಾದಷ್ಟು ತೋಟಗಾರಿಕೆ ಬೆಳೆಗೆ ಅಂತಹ ಸಮಸ್ಯೆಯಾಗಿಲ್ಲ. ಜಿಲ್ಲೆಯಲ್ಲಿ ಶೇ.30ರಷ್ಟು ಮಳೆ ಕೊರತೆಯಾಗಿದೆ. ಮಳೆ ಆಶ್ರಿತ ಕೃಷಿ ಬೆಳೆಗೆ ತೊಂದರೆಯಾಗಿದೆ. ನೀರು ಆಶ್ರಿತ ತೋಟಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರಿಲ್ಲ. ಕೊಳವೆ ಬಾವಿ, ನಾಲೆ, ತೆರೆದ ಬಾವಿ ಹೀಗೆ ಯಾವುದಾದರೊಂದು ಜಲಮೂಲದಿಂದ ತೋಟಗಾರಿಕೆ ಕೃಷಿ ನಡೆಯುತ್ತಿದೆ ಎಂದು ತಿಳಿಸಿದರು.

ಫೂಟ್ಸ್‌ಗೆ ನೋಂದಣಿ ಮಾಡಿ


ಫೂಟ್ಸ್(ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್, ಪಹಣಿಯನ್ನು (ಆರ್‌ಟಿಸಿ) ತೋಟಗಾರಿಕೆ ಸೇರಿದಂತೆ ಕೃಷಿ, ಕಂದಾಯ ಇಲಾಖೆ, ರೈತ ಸಂಪರ್ಕ ನೀಡಿದರೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಹೀಗೆ ನೋಂದಾಯಿತ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ, ಸಬ್ಸಿಡಿ, ಬರ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳು ಹಂಚಿಕೆಯಾಗಲಿದ್ದು, ಇದಕ್ಕೆ ನೋಂದಣಿಯಾಗದಿದ್ದರೆ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ತೋಟಗಾರಿಕಾ ಕೃಷಿಕರು ಸೇರಿದಂತೆ ಎಲ್ಲ ರೈತರು ಇದಕ್ಕೆ ನೋಂದಣಿಯಾಗಬೇಕು ಎಂದು ತಿಳಿಸಿದರು.

*ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮದಲ್ಲಿ ‘ಹಣ್ಣು-ಹೊನ್ನು’ ಸರಣಿಯಲ್ಲಿ ತೋಟಗಾರಿಕೆ ಬೆಳೆ ಕುರಿತು ಪ್ರಚಾರ, ತಿಳಿವಳಿಕೆ, ಅರಿವು ಮೂಡಿಸುವ ಕಾರ್ಯ

*ವಿವಿಧ ಯೋಜನೆಗಳ ಕುರಿತು ಪರಿಚಯ, ಮಾಹಿತಿ ನೀಡಲು ಆಟೋಗಳಲ್ಲಿ ಸ್ತಬ್ಧಚಿತ್ರ ಪ್ರಚಾರ ಪ್ರತಿ ತಾಲೂಕು ಮಟ್ಟದಲ್ಲಿ ಆಯೋಜನೆ.
*8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಕೃಷಿ ಅರಿವು ಕಾರ್ಯಕ್ರಮ.

ವಿಜಯವಾಣಿ ಟೀಂ: ಎಂ.ಆರ್.ಸತ್ಯನಾರಾಯಣ, ಮಂಜುನಾಥ ತಿಮ್ಮಯ್ಯ ಭೋವಿ. ಚಿತ್ರ: ಕೆ.ಎಚ್.ಚಂದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net