

ಯಳಂದೂರು : ಮಹದೇಶ್ವರ ಬೆಟ್ಟದಂತೆ ಬಿಳಿಗಿರಿರಂಗನಬೆಟ್ಟದಲ್ಲೂ ಮುಂಬರುವ ದಿನಗಳಲ್ಲಿ ಸಚಿವ ಸಂಪುಟದ ಸಭೆ ಹಮ್ಮಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈಗ ಜಿಲ್ಲೆಯ ಮ. ಬೆಟ್ಟದಲ್ಲಿ ಸಂಪುಟ ಸಭೆ ಆಯೋಜನೆಗೊಂಡಿದೆ. ಮುಂಬರುವ ದಿನಗಳಲ್ಲಿ ಇಲ್ಲೂ ಸಚಿವ ಸಂಪುಟ ಸಭೆ ನಡೆಸಲು
ಸಿಎಂಗೆ ಮನವಿ ಮಾಡಲಾಗುವುದು ಎಂದರು.
ಮಾಸ್ಟರ್ ಪ್ಲಾನ್ : ದೇಗುಲದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲು, ಇಲ್ಲಿ ಸುಸಜ್ಜಿತ ದಾಸೋಹ ಭವನ ನಿರ್ಮಿಸಲು ಕ್ರಮ ವಹಿಸಲಾಗುವುದು. ನಮ್ಮ ತಂದೆ ಬಿ. ರಾಚಯ್ಯ ಅವರ ಕಾಲದಲ್ಲಿ ನೀಡಿದ್ದ ಜಮೀನುಗಳ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಲ್ಲಿರುವ ಗೊಂದಲಗಳ ನಿವಾರಣೆಗೆ ಪರಿಹಾರ ಲಭಿಸಲು ಕ್ರಮ ವಹಿಸಲಾಗುವುದು ಎಂದರು. ಬೆಟ್ಟ, ಯಳಂದೂರು ಹಾಗೂ ಸಂತೆಮರಹಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಯೋಜನೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸುವೆ ಎಂದು ಕೃಷ್ಣಮೂರ್ತಿ ಭರವಸೆ ನೀಡಿದರು.
ವ್ಯವಸ್ಥಾಪನಾ ಸಮಿತಿಗೆ ನೇಮಕವಾದ ಗುಂಬಳ್ಳಿ ರಾಜಣ್ಣ, ಜೆ. ಶ್ರೀನಿವಾಸ್, ಕೇತಮ್ಮ, ಸ್ಫೂರ್ತಿ, ವೆಂಕಟರಾಮು, ಸಿದ್ದರಾಜು, ಎಂ. ಸುರೇಶ್, ವಿ. ನಾರಾಯಣಸ್ವಾಮಿ ಅವರನ್ನು ಅಭಿನಂದಿಸ ಲಾಯಿತು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಉಪಾಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಚೇತನ್ ದೊರೆರಾಜ್, ರಾಘವೇಂದ್ರ, ನಂಜುಂಡಸ್ವಾಮಿ, ಶಿವು, ವಿಶ್ವ, ವೆಂಕಟೇಶ್ ಇತರರು ಇದ್ದರು.