ಸರ್ಕಾರಿ ನೌಕರರ ಬಳಿ ಬಿಪಿಎಲ್ !

BPL
Published on
ಮಡಿಕೇರಿ
ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್ ಸಿಗಬೇಕು ಎನ್ನುವುದು ಸರ್ಕಾರದ ಕಾಳಜಿ. ಆದರೆ ಕೈತುಂಬಾ ಸಂಬಳ ತೆಗೆದುಕೊಳ್ಳುವ ಸರ್ಕಾರಿ ನೌಕರರೂ ಅಡ್ಡದಾರಿಯಿಂದ ಇಂಥ ಆದ್ಯತಾ ಪಡಿತರ ಚೀಟಿ ಪಡೆದುಕೊಂಡು ಬಡವರ ಸವಲತ್ತುಗಳಿಗೆ ಕನ್ನ ಹಾಕುವುದು ಮಾತ್ರ ನಿಂತಿಲ್ಲ. ಕೊಡಗಿನಲ್ಲಿ ಈ ರೀತಿಯಲ್ಲಿ ಪಡಿತರ ಚೀಟಿ ಹೊಂದಿಕೊAಡಿದ್ದ ೨೭ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ವರ್ಗಾಯಿಸಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಮತ್ತು ನಿರ್ದಿಷ್ಟ ಆದಾಯದ ಮಿತಿ ಮೀರದಿರುವ ಕುಟುಂಬಗಳಿಗೆ ಸರ್ಕಾರದಿಂದ ಒದಗಿಸಲಾಗಿರುವ ಗುರುತಿನ ಚೀಟಿಯಂತೆ ಬಿಪಿಎಲ್ ಕಾರ್ಡ್ ಅನ್ನು ಪರಿಗಣಿಸಲಾಗುತ್ತದೆ. ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳು, ಸಬ್ಸಿಡಿ ಸಹಿತ ಆಹಾರ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ವಸತಿಗಳಂಥ ಪ್ರಯೋಜನಗಳನ್ನು ಹೊಂದಿಕೊಳ್ಳಲು ಬಿಪಿಎಲ್ ಕಾರ್ಡ್ ಅನ್ನು ಮಾನದಂಡವಾಗಿ ಬಳಸಲಾಗುತ್ತದೆ.
ಈಗಿನ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷಿö್ಮÃ ಯೋಜನೆಗೆ ಬಿಪಿಎಲ್ ಕಾರ್ಡ್ ಅನ್ನು ಮಾನದಂಡವಾಗಿ ಮಾಡಿರುವುದರಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗೆ ಬೇಡಿಕೆ ಜಾಸ್ತಿ ಆಗಿದೆ. ಹಾಗಾಗಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಹೊರತಾಗಿಯೂ ಬಿಪಿಎಲ್ ಕಾರ್ಡ್ಗಳನ್ನು ಹೊಂದಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರದ ಮಿತಿಯನ್ನು ಮೀರಿ ಬಿಪಿಎಲ್ ಕಾರ್ಡ್ಗಳು ಹಂಚಿಕೆ ಆಗಿರುವುದು ಕಂಡುಬರುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಮತ್ತು ಹಿಂದುಳಿದವರಿಗೆ ಅಗತ್ಯ ಸಂಪನ್ಮೂಲಗಳನ್ನು ಪಡೆದುಕೊಳ್ಳಲು, ಸಾಮಾಜಿಕ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಲು ಬಿಪಿಎಲ್ ಕಾರ್ಡ್ಗಳು ಪ್ರಮುಖ ಪಾತ್ರ ವಹಿಸಿದೆ. ಆಹಾರ ಭದ್ರತೆ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಮೂಲಭೂತ ಅಗತ್ಯಗಳನ್ನು ಪರಿಹರಿಸುವ ಮೂಲಕ ಬಿಪಿಲ್ ಕಾರ್ಡ್ಗಳು ಬಡತನದ ಚಕ್ರ ಮುರಿಯಲು ಸಹಾಯಕವಾಗಿದೆ. ಆದರೆ ಈ ಯೋಜನೆಗೆ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಳ್ಳುತ್ತಿರುವುದು ಯೋಜನೆಯನ್ನೇ ಅಣಕಿಸುವಂತೆ ಇರುವುದು ಅಷ್ಟೇ ಸತ್ಯ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರು.
ಕೊಡಗಿನಲ್ಲಿ ಒಟ್ಟು ೧,೪೭,೬೩೩ ಪಡಿತರ ಚೀಟಿಗಳಿವೆ. ೪,೩೭,೭೪೦ ಫಲಾನುಭವಿಗಳು ಇದ್ದಾರೆ. ಇದರಲ್ಲಿ ೯,೪೩೨ ಅಂತ್ಯೋದಯ ಅನ್ನ ಪಡಿತರ ಚೀಟಿಗಳಾಗಿದ್ದರೆ, ೧,೦೦,೩೭೯ ಆದ್ಯತೆಯ (ಬಿಪಿಎಲ್) ಪಡಿತರ ಚೀಟಿಗಳಾಗಿವೆ. ೩೭,೮೨೨ ಎಪಿಎಲ್ ಪಡಿತರ ಚೀಟಿಗಳಿವೆ. ನ.೨೯ರ ತನಕ ೧,೧೦೮ ಅರ್ಜಿಗಳು ಪಡಿತರ ಚೀಟಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಕೆ ಆಗಿದೆ.
ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಸರ್ಕಾರ ೨೦೧೭ ರಲ್ಲಿ ‘ಹೊರಗಿಡುವ ಮಾನದಂಡ’ಗಳನ್ನು ರೂಪಿಸಿದೆ. ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡAತೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು,
ಗ್ರಾಮೀಣ ಪ್ರದೇಶಗಳಲ್ಲಿ ೩ ಹೆಕ್ಟರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ೧,೦೦೦ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾö್ಯಕ್ಟರ್, ಮಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು, ಕುಟುಂಬದ ವಾರ್ಷಿಕ ಆದಾಯ ೧.೨೦ ರೂ. ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ (ಆದ್ಯತೆಯ ಕಾರ್ಡ್) ಕೊಡುವಂತಿಲ್ಲ. ಆದರೆ ಆದ್ಯತೇತರ (ಎಪಿಎಲ್) ಪಡಿತರ ಚೀಟಿ ಪಡೆಯಲು ಯಾವುದೇ ಮಾನದಂಡ ಸರ್ಕಾರ ನಿಗದಿಪಡಿಸಿಲ್ಲ.
ಬಿಪಿಎಲ್ ಕಾರ್ಡ್ಗಳನ್ನು ಹೊಂದಿಕೊಳ್ಳಲು ಇಷ್ಟೆಲ್ಲಾ ಮಾನದಂಡಗಳು ಇದ್ದರೂ ಅಡ್ಡದಾರಿಯಿಂದ ಆದ್ಯತೆಯ ಪಡಿತರ ಚೀಟಿ ಪಡೆದುಕೊಳ್ಳುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಿಸುವ ಕೆಲಸಕ್ಕೆ ಸರ್ಕಾರ ಮುಂದಾಯಿತಾದರೂ ಕೆಲವೊಂದು ಲೋಪಗಳಿಂದ ಅರ್ಹರು ಕೂಡ ಬಿಪಿಎಲ್ ಪಟ್ಟಿಯಿಂದ ಹೊರಗುಳಿಯುವಂತಾಯಿತು. ಹಾಗಾಗಿ ಸರ್ಕಾರದ ಈ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬಿಪಿಎಲ್ ಪರಿಷ್ಕರಣಾ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸದನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಕೊಡಗಿನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸರ್ಕಾರಿ ನೌಕರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಸಿ ಮುಟ್ಟಿಸಿದೆ. ಸರ್ಕಾರಿ ನೌಕರರನ್ನು ಅವಲಂಬಿತ ಕುಟುಂಬಕ್ಕೆ ಸೇರಿದ ೨೭ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಪಡಿತರ ಚೀಟಿಗಳಿಗೆ ವರ್ಗಾಯಿಸಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧೧, ಸೋಮವಾರಪೇಟೆ ತಾಲೂಕಿನಲ್ಲಿ ೨, ವಿರಾಜಪೇಟೆ ತಾಲೂಕಿನಲ್ಲಿ ೮, ಕುಶಾಲನಗರ ತಾಲೂಕಿನಲ್ಲಿ ೩ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಇಂಥ ೩ ಪ್ರಕರಣಗಳು ವರದಿಯಾಗಿದೆ.
ಬಿಪಿಎಲ್ ಕಾರ್ಡ್ಗಳು ಈಗ ಎಪಿಎಲ್ ಕಾರ್ಡ್ಗಳಾಗಿ ವರ್ಗಾಯಿಸಲಾಗಿದೆ. ಆದರೆ, ಸರ್ಕಾರಿ ನೌಕರರಾಗಿದ್ದುಕೊಂಡು ಸರ್ಕಾರವನ್ನೇ ವಂಚಿಸಿದ ಇಂಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಸಾರ್ವಜನಿಕರು.
ಬಿಪಿಎಲ್ ಪಡಿತರಚೀಟಿದಾರರನ್ನು ಪರಿಷ್ಕರಿಸಿ ಅನರ್ಹರನ್ನು ಎಪಿಎಲ್‌ಗೆ ಪರಿವರ್ತಿಸುವ ಕೆಲಸಕ್ಕೆ ಕೈ ಹಾಕಲಾಗಿತ್ತು. ಈ ಪ್ರಯತ್ನದಲ್ಲಿ ಒಂದೆರಡು ಲೋಪಗಳನ್ನು ಮುಂದಿಟ್ಟುಕೊAಡು ಪ್ರತಿಪಕ್ಷಗಳು ಮಾಧ್ಯಮಗಳ ಮುಂದೆ ಹೋಗಿದ್ದವು. ಜನರ ಮಧ್ಯೆಯೂ ಆತಂಕ ಶುರುವಾಯಿತು. ಇದರಿಂದಾಗಿ ಪ್ರಕ್ರಿಯೆ ಸ್ಥಗಿತ ಮಾಡಲಾಗಿದೆ. ಪ್ರತಿಪಕ್ಷಗಳು ಸಹಕರಿಸಿದರೆ ೩ ತಿಂಗಳೊಳಗೆ ಪಡಿತರ ಚೀಟಿಗಳನ್ನು ಪರಿಷ್ಕರಿಸಿ ಅನರ್ಹ ಬಿಪಿಎಲ್ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುವುದು. ಕೆ.ಎಚ್. ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net