ಬಿಪಿಎಲ್ ಕಾರ್ಡ್‌ಗೆ ಬೇಡಿಕೆ

16mdk01 Kumudha
Published on

ಮಡಿಕೇರಿ:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಈ ಯೋಜನೆಯ ಅರ್ಹ ಫಲಾನುಭವಿ ಆಗಿರಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಪ್ರಮುಖ ಷರತ್ತುಗಳಲ್ಲಿ ಒಂದು. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು ೧ಲಕ್ಷದ ೪೯ ಸಾವಿರಷ್ಟು ವಿವಿಧ ಮಾದರಿಯ ಕಾರ್ಡ್‌ಗಳಿದ್ದು, ಎಷ್ಟು ಮಹಿಳೆಯರಿಗೆ ಯೋಜನೆಯ ಲಾಭ ಸಿಗಲಿದೆ ಎನ್ನುವುದು ಸದ್ಯದ ಕುತೂಹಲ. ಮತ್ತೊಂದು ಕಡೆ ಹೊಸದಾಗಿ ಬಿಪಿಎಲ್ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೊಸದಾಗಿ ಅರ್ಜಿ ಸ್ವೀಕರಿಸದಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಪೈಕಿ ’ಗೃಹಲಕ್ಷ್ಮಿ’ ಯೋಜನೆ ಮಹತ್ವದ್ದಾಗಿದೆ. ಈ ಗ್ಯಾರಂಟಿ ಮಹಿಳೆಯರ ಮನಗೆದ್ದು ಮತಗಳಾಗಿ ಪರಿವರ್ತನೆ ಆಗುವಲ್ಲೂ ದೊಡ್ಡ ಪಾತ್ರ ವಹಿಸಿದೆ. ಪ್ರತಿ ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ೨೦೦೦ ರೂ. ಳನ್ನು ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಈ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಆಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಮನೆ ಯಜಮಾನಿ ಖಾತೆಗೆ ಮೊದಲ ಕಂತಿನ ಹಣ ಸೇರುವ ಎಲ್ಲಾ ನಿರೀಕ್ಷೆಗಳಿದೆ.

ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಎಂದು ನಮೂದಾಗಿರುವ ಮಹಿಳೆ ಈ ಯೋಜನೆಯ ಫಲಾನುಭವಿ ಆಗಿರುತ್ತಾಳೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್‌ಸೈಟ್ ಮಾಹಿತಿ ಪ್ರಕಾರ ಕೊಡಗಿನಲ್ಲಿ ಈ ಮೂರು ಮಾದರಿಯ ಒಟ್ಟು ೧,೪೮,೬೫೬ ಕಾರ್ಡ್‌ಗಳಿವೆ. ಮಡಿಕೇರಿ ತಾಲೂಕಿನಲ್ಲಿ ೨,೦೨೦ ಅಂತ್ಯೋದಯ, ೧೩,೭೪೩ ಎಪಿಎಲ್ ಹಾಗೂ ೨೩,೧೨೭ ಬಿಪಿಎಲ್ ಕಾರ್ಡ್‌ಗಳಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ೧,೩೪೪ ಅಂತ್ಯೋದಯ, ೪,೪೧೮ ಎಪಿಎಲ್ ಹಾಗೂ ೨೩,೨೧೭ ಬಿಪಿಎಲ್ ಕಾರ್ಡ್‌ಗಳಿದ್ದರೆ, ವಿರಾಜಪೇಟೆ ತಾಲೂಕಿನಲ್ಲಿ ೨,೩೯೪ ಅಂತ್ಯೋದಯ, ೬೨೮೫ ಎಪಿಎಲ್ ಹಾಗೂ ೧೯,೪೨೦ ಬಿಪಿಎಲ್ ಕಾರ್ಡ್‌ಗಳಿವೆ.ನ ಕುಶಾಲನಗರ ತಾಲೂಕಿನಲ್ಲಿ ೧೬೦೪ ಎಪಿಎಲ್, ೪,೫೭೪ ಎಪಿಎಲ್ ಹಾಗೂ ೨೧,೨೫೩ ಬಿಪಿಎಲ್ ಕಾರ್ಡ್‌ಗಳಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ೨,೪೬೬ ಅಂತ್ಯೋದಯ, ೮,೧೦೮ಎಪಿಎಲ್ ಹಾಗೂ ೧೫,೬೪೩ ಬಿಪಿಎಲ್ ಕಾರ್ಡ್‌ಗಳಿದೆ.

೨೦೨೩ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾ. ೨೯ರಂದು ಅಧಿಸೂಚನೆ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಮಾದರಿ ಚುನಾವಣೆ ನೀತಿ ಸಂಹಿತೆಯೂ ಜಾರಿಗೆ ಬಂದಿತ್ತು. ಈ ಸಂದರ್ಭದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಈಗ ಚುನಾವಣೆ ಮುಗಿದು ಹೊಸ ಸರ್ಕಾರವೂ ಅಸ್ತಿತ್ವಕ್ಕೆ ಬಂದಿದೆ. ಆದರೆ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸ್ವೀಕಾರ ಇನ್ನೂ ಆರಂಭವಾಗಿಲ್ಲ. ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಸಂಬಂಧಿಸಿದ ವೆಬ್‌ಸೈಟ್ ಓಪನ್ ಆಗುತ್ತಲೇ ಇಲ್ಲ.

ಹೊಸದಾಗಿ ಕಾರ್ಡ್ ಮಾಡಿಸಿಕೊಂಡವರಿಗೆ ಸದ್ಯಕ್ಕೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಕಾರ್ಡ್ ಮಾಡಿಸಿಕೊಳ್ಳಲು ಜನಸಾಮಾನ್ಯರು ಪ್ರಯತ್ನ ಮುಂದುವರಿಸಿದ್ದಾರೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ದಿನಂಪ್ರತಿ ಭೇಟಿ ನೀಡುವ ಸಾರ್ವಜನಿಕರು ಬಿಪಿಎಲ್ ಕಾರ್ಡ್ ಬಗ್ಗೆ ವಿಚಾರಣೆ ನಡೆಸಿ ಮರಳುವುದು ಸಾಮಾನ್ಯವಾಗಿದೆ. ಸರ್ಕಾರ ಅನುಮತಿಸಿದ ಕೂಡಲೇ ಹೊಸ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸಲಾಗುತ್ತದೆ ಎನ್ನುವ ಅಧಿಕಾರಿಗಳು ಪ್ರತಿ ದಿನ ಸಾರ್ವಜನಿಕರಿಗೆ ಉತ್ತರ ಕೊಟ್ಟು ಸುಸ್ತಾಗುತ್ತಿದ್ದಾರೆ.

ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ನಿಗದಿಯಾಗಿದ್ದ ಗುರಿಯಂತೆ ಚುನಾವಣೆಗೂ ಮೊದಲು ಕೊಡಗಿನಲ್ಲಿ ಹೊಸದಾಗಿ ೨,೮೩೫ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕಾರ್ಡ್‌ಗಾಗಿ ಸ್ವೀಕರಿಸಿರುವ ಅರ್ಜಿಗಳ ಪೈಕಿ ಇನ್ನು ೨,೮೧೦ ಅರ್ಜಿಗಳು ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಈ ಅರ್ಜಿಗಳನ್ನು ವಿಲೇವಾರಿ ಮಾಡುವುದರ ಜೊತೆಗೆ ಸರಕಾರ ಅವಕಾಶ ನೀಡಿದ ನಂತರ ಮತ್ತಷ್ಟು ಕಾರ್ಡ್‌ಗಳನ್ನು ವಿತರಿಸಿದಲು ಇಲಾಖೆ ಸಜ್ಜಾಗಿದೆ.

ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲಿ ಸಾಮಾನ್ಯವಾಗಿ ಜಿಲ್ಲೆಗೆ ಒಬ್ಬರು ಉಪ ನಿರ್ದೇಶಕರು ಇರುತ್ತಾರೆ. ಆದರೆ ಕೊಡಗಿನಲ್ಲಿ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರ ಹುದ್ದೆ ಖಾಲಿ ಇದೆ. ಈ ಹಿಂದೆ ಡಿಡಿ ಆಗಿದ್ದ ಗೌರವ್ ಕುಮಾರ್ ಶೆಟ್ಟಿ ಕಳೆದ ವರ್ಷ ಮೇ ತಿಂಗಳಿನಲ್ಲಿ ವರ್ಗ ಆಗಿದ್ದರು. ಜಂಟಿ ನಿರ್ದೇಶಕರಾದ ಕುಮುದಾ ಶರತ್ ಕಳೆದ ಆಗಸ್ಟ್‌ನಿಂದ ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವುದರಿಂದ ಎರಡೆರಡು ಜಿಲ್ಲೆಗಳ ಜವಾಬ್ದಾರಿ ಒಬ್ಬ ಅಧಿಕಾರಿಗೆ ವಹಿಸಲಾಗಿದೆ ಎನ್ನಲಾಗಿದೆ.

ಬಿಪಿಎಲ್ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಕಚೇರಿಗೆ ಬಂದು ವಿಚಾರಿಸಿಕೊಂಡು ಹೋಗುವವರ ಸಂಖ್ಯೆಯೂ ಜಾಸ್ತಿ ಆಗಿದೆ. ಆದರೆ ಈಗ ಬಿಪಿಎಲ್ ಕಾರ್ಡ್‌ಗೆ ಹೊಸ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸ್ವೀಕರಿಸುವ ವೆಬ್‌ಸೈಟ್ ಕೆಲಸ ಮಾಡುತ್ತಿಲ್ಲ. ಸರ್ಕಾರ ಅನುಮತಿ ನೀಡಿದ ಕೂಡಲೇ ಹೊಸ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸಲಾಗುವುದು.
ಕುಮುದಾ ಶರತ್, ಜಂಟಿ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net