

ಪ್ರಲ್ಹಾದ್ ತಿಳಗುಳ ಶಹಾಪುರ
ಸಮಾಜದಲ್ಲಿ ನಿರ್ಗತಿಕ ಹಾಗೂ ಬಡ ವರ್ಗದ ಜನತೆ ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ಸರ್ಕಾರಗಳು ವಿವಿಧ ಯೋಜನೆಗಳಡಿ ವಸತಿ ಸೌಲಭ್ಯ ಕೊಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷೃಕ್ಕೆ ಒಳಗಾಗಿ ಹಲವು ಕುಟುಂಬಗಳು ಇನ್ನೂ ಸ್ವಂತ ಸೂರಿಲ್ಲದೆ ಬೀದಿಯಲ್ಲಿ ಜೀವನ ನಡೆಸುತ್ತಿವೆ. ಹೀಗೆ ಮುರುಕುಲು ಗುಡಿಸಲಲ್ಲಿ ವಾಸವಿದ್ದ ಮಹಿಳೆಗೆ ದಾನಿಗಳೇ ಮುಂದೆ ಬಂದು ಮನೆ ನಿರ್ಮಿಸಿಕೊಡುತ್ತಿದ್ದಾರೆ.
ನಗರದ ಮಮದಾಪುರ ಬಡಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಿರುವ ಸೂಗಮ್ಮ ಎಂಬ ಬಡ ಮಹಿಳೆ ಸಣ್ಣದೊಂದು ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಓರ್ವ ಪುತ್ರಿಯೂ ಇದ್ದಾಳೆ. ತೀರಾ ಬಡ ವರ್ಗದವರಾದ ಇವರು, ತಮಗೊಂದು ಮನೆ ಮಂಜೂರು ಮಾಡಿಕೊಡಿ ಎಂದು ಆಡಳಿತಕ್ಕೆ ಹಲವು ಬಾರಿ ವಿನಂತಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಅಷ್ಟರಲ್ಲೇ ಹೆಮ್ಮಾರಿಯಂತೆ ಬಂದ ಕರೊನಾ ವೈರಸ್ನಿಂದ ಲಾಕ್ಡೌನ್ ವೇಳೆ ಸೂಗವ್ವ ಅವರ ಬದುಕು ಬೀದಿಗೆ ಬಂದು ಬಿಟ್ಟಿತು. ಈ ವೇಳೆ ಬಡ ಜನತೆಗೆ ಉಚಿತ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದ ಶಹಾಪುರದ ಗೆಳೆಯರ ಬಳಗಕ್ಕೆ ಈ ಮಹಿಳೆ ಪಡುತ್ತಿರುವ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಈ ಯುವಕರು, ನಿರ್ಗತಿಕ ಮಹಿಳೆ ಕುಟುಂಬಕ್ಕೆ ಮನೆ ನಿಮರ್ಾಣ ಮಾಡುವ ಸಂಕಲ್ಪ ಮಾಡಿದ್ದಾರೆ.
ಅಲ್ಲದೆ ಎಲ್ಲ ಗೆಳೆಯರೊಂದಿಗೆ ಕೂಡಿಕೊಂಡು 10/14 ಅಳತೆ ಸ್ಥಳದಲ್ಲಿ ಸಧ್ಯ ಮನೆ ನಿರ್ಮಾಣಕ್ಕೆ ಶ್ರೀಕಾರವಿಟ್ಟಿದ್ದು, ಈ ಪುಣ್ಯದ ಕಾರ್ಯಕ್ಕೆ ಚರಬಸವೇಶ್ವರ ಗದ್ದುಗೆಯ ಶರಣು ಗದ್ದುಗೆ ಅವರು ಅಡಿಗಲ್ಲು ನೆರೆವೇರಿಸಿದ್ದಾರೆ. ಇವರ ಜನತೆಯಲ್ಲಿ ಅಮ್ಮಾ ಚಾರಿಕಟೇಬಲ್ ಟ್ರಸ್ಟ್ನ ಗುರು ಮಣಿಕಂಠ, ಅರವಿಂದ ಉಪ್ಪಿನ, ವಿಶ್ವ ಪಾಲಕಿ, ಸಿದ್ದು ಆನೆಗುಂದಿ, ಪ್ರದೀಪ ಶಿರವಾಳ, ಬಸ್ಸು ಶಿರವಾಳ, ಅವಿನಾಶ ಗುತ್ತೇದಾರ, ಮಲ್ಲಿಕಾರ್ಜುನ ಜಾಕಾ, ಬಸ್ಸು ಎಸ್., ಮಲ್ಲು ಮಮದಾಪುರ ಹಾಗೂ ಗುರು ಸಹಕಾರ ನೀಡಿದ್ದಾರೆ. ಈ ರೀತಿಯ ಸಹಕಾರ ಮನೋಭಾವ ಎಲ್ಲರಲ್ಲೂ ಬಂದರೆ ನಿರ್ಗತಿಕ ಮತ್ತು ಬಡ ವರ್ಗದ ಜನತೆ ಪಡುವ ತೊಂದರೆಗಳಿಗೆ ಸ್ವಲ್ಪವಾದರೂ ಪರಿಹಾರ ಸಿಗುವುದರಲ್ಲಿ ಸಂದೇಹವಿಲ್ಲ