ಸಮಸ್ಯೆ ಬಗೆಹರಿಯದಿದ್ದರೆ ಚುನಾವಣೆ ಬಹಿಷ್ಕಾರ

13 HANUR 1
Published on


ಚಾಮರಾಜನಗರ : ಡಿ.ಎಂ.ಸಮುದ್ರ ಗ್ರಾಮ ಘಟಕದ ವ್ಯಾಪ್ತಿಯ ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ರೈತ ಸಂಘದ ಗ್ರಾಮ ಘಟಕ ಎಚ್ಚರಿಸಿದೆ.

ತಾಲೂಕಿನ ಡಿ.ಎಂ.ಸಮುದ್ರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಮೈಕಲ್ ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ಕೃಷಿ ಮಾಡಲು ನೀರಿನ ಸಮಸ್ಯೆ ಎದುರಾಗಿದೆ.

ಆದ್ದರಿಂದ ಹುಬ್ಬೆ ಹುಣಸೆ ಹಾಗೂ ಉಡುತೊರೆ ಜಲಾಶಯದಿಂದ ಹಳ್ಳಗಳಿಗೆ ನೀರು ಹರಿಸಬೇಕು. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು. ಜತೆಗೆ ಜಾನುವಾರುಗಳಿಗೆ ನೀರು ಹಾಗೂ ಮೇವನ್ನು ಒದಗಿಸಬೇಕು. ರೈತರಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಕೊಡಿಸಬೇಕು ಎಂದು ಒತ್ತಾಯಿಸಿದರು.


ಸಂಘದ ಕಾರ್ಯದರ್ಶಿ ಭೈರನತ್ತ ರಾಜು ಮಾತನಾಡಿ, ಭೈರನತ್ತ ಡಿ.ಎಂ.ಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಹಳ್ಳವಿದ್ದು, ಮಳೆಗಾಲದ ವೇಳೆ ಹೆಚ್ಚಾಗಿ ನೀರು ಹರಿಯುತ್ತದೆ. ಈ ವೇಳೆ ಹಲವರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗಿದೆ. ಹಳ್ಳಕ್ಕೆ ಸೇತುವೆಯನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.

ಜತೆಗೆ ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚುನಾವಣೆಗೂ ಮುನ್ನ ಸೇತುವೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.

ರೈತ ಮುಖಂಡರಾದ ಎಂ.ಟಿ ದೊಡ್ಡಿಯ ಶ್ರೀನಿವಾಸ್, ರವಿ, ತಿಮ್ಮೇಗೌಡ, ವೀರಭದ್ರೇಗೌಡ, ಡಿ.ಎಂ. ಸಮುದ್ರದ ಪ್ರಸನ್ನ ಕುಮಾರ್, ಕುಳ್ಳಪ್ಪ, ಪುಟ್ಟಸ್ವಾಮಿ, ರಾಜು, ಪ್ರಭು, ಶಂಕರ್, ವೈಶಂಪಾಳ್ಯದ ಪ್ರದೀಪ್‌ಕುಮಾರ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net