ಆನೆಕಟ್ಟೆ ಅಭಿವೃದ್ಧಿಪಡಿಸದಿದ್ದರೆ ಚುನಾವಣೆ ಬಹಿಷ್ಕಾರ

03M.D.R.9
ಮದ್ದೂರು ತಾಲೂಕಿನ ಆನೆದೊಡ್ಡಿ ಗ್ರಾಮದ ಆನೆಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಾಮೇಗೌಡ, ಕೃಷ್ಣಪ್ಪ, ಮಂಜುನಾಥ, ಮರೀಗೌಡ, ಕುಮಾರ ಇದ್ದರು.
Published on

ಮದ್ದೂರು: ತಾಲೂಕಿನ ಆನೆದೊಡ್ಡಿ ಗ್ರಾಮದ ಆನೆಕಟ್ಟೆಯನ್ನು ನರೇಗಾ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ತಕ್ಷಣ ಕಟ್ಟೆಯನ್ನು ಅಭಿವೃದ್ಧಿಪಡಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಮುಖಂಡ ಆನೆದೊಡ್ಡಿ ರಾಮೇಗೌಡ ಅವರು ಮಾತನಾಡಿ, ಆನೆದೊಡ್ಡಿ ಗ್ರಾಮದ ಪುರಾತನವಾದ ಆನೆಕಟ್ಟೆಯನ್ನು ಅಭಿವೃದ್ಧಿಪಡಿಸಲು ನರೇಗಾ ಯೋಜನೆ ಅಡಿಯಲ್ಲಿ 20 ಲಕ್ಷ ರೂ. ಯೋಜನೆ ಮೂಲಕ ಮಂಜೂರಾಗಿತ್ತು. ಅಧಿಕಾರಿಗಳು ಕಟ್ಟೆಯ ಹೂಳೆತ್ತಿ ಕಟ್ಟೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದ್ದರಿಂದ ಆ ಹಣವನ್ನು ಕಟ್ಟೆಯ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಬರಗಾಲ ಇರುವುದರಿಂದ ಕಟ್ಟೆಯನ್ನು ಅಭಿವೃದ್ಧಿಪಡಿಸಿದ್ದರೆ ಮಳೆ ಬಂದಾಗ ಕಟ್ಟೆಯ ನೀರು ರೈತರಿಗೆ ಮತ್ತು ಗ್ರಾಮಸ್ಥರಿಗೆ ಆಸರೆಯಾಗುತ್ತಿತ್ತು. ಅಧಿಕಾರಿಗಳು ಕುಂಟುನೆಪ ಹೇಳಿಕೊಂಡು ಸಮರ್ಪಕವಾಗಿ ನರೇಗಾ ಯೋಜನೆಯನ್ನು ಅನುಷ್ಠಾನ ಮಾಡದೆ ನಮ್ಮ ಗ್ರಾಮಕ್ಕೆ ಅನ್ಯಾಯವೆಸಗಿದ್ದಾರೆ. ತಾಲೂಕು ಮತ್ತು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಗ್ರಾಮದ ಆನೆಕಟ್ಟೆಯನ್ನು ವಿಶೇಷ ಎಂದು ಪರಿಗಣಿಸಿ ತಕ್ಷಣ ಅಭಿವೃದ್ಧಿಪಡಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಗ್ರಾಮಸ್ಥರು ಮತದಾನದಿಂದ ದೂರ ಉಳಿಯುವ ಮೂಲಕ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೊಸಕೆರೆ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಹಿರಿಯ ಅಧಿಕಾರಿಗಳು ವಿಫಲರಾಗಿದ್ದಾರೆ. ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಕೃಷ್ಣಪ್ಪ, ಮುಖಂಡರಾದ ಆನೆದೊಡ್ಡಿ ರಾಮೇಗೌಡ, ಮಂಜುನಾಥ, ಮರೀಗೌಡ, ಕುಮಾರ, ಪ್ರವೀಣ, ಯೋಗಾನಂದ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net