

ಬ್ಯಾಡಗಿ: ಹೆಸ್ಕಾಂ ವಿದ್ಯುತ್ ದರ ಏರಿಕೆ ಪರಿಣಾಮ ಗ್ರಾಮಸ್ಥರ ಮನೆಗಳಿಗೆ ನೀಡಿದ ವಿದ್ಯುತ್ ಪಾವತಿಗಳಲ್ಲಿ 2-3 ಪಟ್ಟು ಮೊತ್ತ ಹೆಚ್ಚಾಗಿದೆ. ಕೂಡಲೇ ಸರಿಪಡಿಸಿ ಹೊಸ ಪಾವತಿ ನೀಡುವವರೆಗೂ ಗ್ರಾಮದೊಳಗೆ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಿಡುವುದಿಲ್ಲ ಗ್ರಾಮದ ದ್ವಾರ ಪ್ರವೇಶದಲ್ಲಿ ‘ಗ್ರಾಮ ಪ್ರವೇಶಕ್ಕೆ ಬಹಿಷ್ಕಾರ ಬ್ಯಾನರ್’ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ಸೋಮವಾರ ಜರುಗಿದೆ.
ಏ. 1ರಿಂದ ಏಕಾಏಕಿ ವಿದ್ಯುತ್ ಬಿಲ್ ಏರಿಕೆ ಮಾಡಿದ್ದು, ಸಾರ್ವಜನಿಕರಿಗೆ ಹೊರೆಯಾಗಿದೆ. ಈ ಹಿಂದೆ ಪ್ರತಿ ಮನೆಗೆ 150ರಿಂದ 200 ರೂ. ಬಿಲ್ ಬರುತ್ತಿತ್ತು. ಆದರೆ, ಈಗ ಜೂನ್ ಬಿಲ್ನಲ್ಲಿ 500 ರೂ. ಯಿಂದ 2 ಸಾ.ರೂ.ವರೆಗೆ ಏರಿಕೆಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ರೈತ ಮುಖಂಡ ಕಿರಣಕುಮಾರ ಗಡಿಗೋಳ ಮಾತನಾಡಿ, ಗ್ರಾಮಸ್ಥರು ಹಿಂದಿನಂತೆ ವಿದ್ಯುತ್ ಬಿಲ್ ಪಾವತಿಸಲು ಬದ್ಧರಾಗಿದ್ದಾರೆ. ಆದರೆ, ಹೆಸ್ಕಾಂ ಏಕಾಏಕಿ ಬಳಕೆ ದರವನ್ನು ಯೂನಿಟ್ಗೆ 70 ಪೈಸೆ, ಕೀ.ವ್ಯಾಟ್ಗೆ 100 ರೂ. ಏರಿಕೆ ಮಾಡಿರುವುದು ನ್ಯಾಯಸಮ್ಮತವಲ್ಲ. ಕೂಡಲೇ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥ ನಾಗಪ್ಪ ಭಾವಿಕಟ್ಟೆ ಮಾತನಾಡಿ, ಗ್ರಾಮಸ್ಥರ ಎಲ್ಲ ಪಾವತಿ ಬಿಲ್ಗಳನ್ನು ಹೆಸ್ಕಾಂ ಸಿಬ್ಬಂದಿ ಸಂಗ್ರಹಿಸಿ, ಎರಡು ತಿಂಗಳಲ್ಲಿ ಏರಿಕೆ ಮಾಡಿದ ಬಿಲ್ ಅನ್ನು ಕಡಿಮೆ ಮಾಡಿ ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ಗುರಿಯಾಗುತ್ತೀರಿ. ಅಧಿಕಾರಿಗಳು ಗ್ರಾಮಸ್ಥರ ಸಭೆ ನಡೆಸಬೇಕು. ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಲಿ, ಇತರೆ ತೊಂದರೆ ಕೊಡಲು ಯತ್ನಿಸಿದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಈರನಗೌಡ ತೆವರಿ, ಸಿದ್ದನಗೌಡ ಪಾಟೀಲ, ಗುಡ್ಡಪ್ಪ ಕಳಕನವರ, ನಾಗಪ್ಪ ತೆವರಿ, ಮಲ್ಲಿಕಾರ್ಜುನ ದುರ್ಗದ, ಆರ್.ಐ. ಮಳ್ಳಪ್ಪನವರ, ಈರಪ್ಪ ಬಿದರಿ, ಬಸಪ್ಪ ಮಾಸಣಗಿ, ರಾಜಪ್ಪ ದೊಡ್ಡಮನಿ, ಎಸ್.ಕೆ. ಬಳಿಗಾರ, ಬಿ.ಎಂ. ಹುಲ್ಲತ್ತಿ, ಎಸ್.ಎನ್. ಗಡಿಗೋಳ, ಪಿ.ಎ. ಕೊಪ್ಪದ ಇತರರಿದ್ದರು.