ನೀರಿನಲ್ಲಿ ಮುಳುಗಿ ಬಾಲಕ, ಮಹಿಳೆ ಸಾವು

Drowning-Death1
Published on

ಭಟ್ಕಳ: ಬಾಲಕನೊಬ್ಬ ಹೊಳೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದು, ಆತನನ್ನು ರಕ್ಷಿಸಲು ಹೋದ ಮಹಿಳೆಯೂ ನೀರುಪಾಲಾದ ಘಟನೆ ಕಡವಿನಕಟ್ಟೆ ಸಮೀಪ ಕಂಡೆಕೊಡ್ಲುವಿನಲ್ಲಿ ಶುಕ್ರವಾರ ಸಾಯಂಕಾಲ ನಡೆದಿದೆ.
ತಾಲೂಕಿನ ಕಂಡೆಕೊಡ್ಲುವಿನ ನಿವಾಸಿ ಪಾರ್ವತಿ ಶಂಕರ ನಾಯ್ಕ(35) ಮೃತ ಮಹಿಳೆ. ಕಂಡೆಕೋಡ್ಲು ನಿವಾಸಿ ಸೂರಜ್ ಪಾಂಡು ನಾಯ್ಕ (17) ಮೃತ ಬಾಲಕ ಎಂದು ತಿಳಿದು ಬಂದಿದೆ. ಇವರು ಕುಟುಂಬದ ಐವರು ಸೇರಿಕೊಂಡು ಕಡವಿಕಟ್ಟೆ ಡ್ಯಾಂ ಸಮೀಪ ಸ್ವಲ್ಪ ದೂರದಲ್ಲಿ ಈಜಲು ತೆರಳಿದ್ದರು. ಹೊಳೆಯಲ್ಲಿ ಈಜುತ್ತಿರುವ ವೇಳೆ ಸೂರಜ್ ನೀರಿನಲ್ಲಿ ಮುಳುಗುತ್ತಿರುದ್ದನ್ನು ಗಮನಿಸಿದ ಪಾರ್ವತಿ ನಾಯ್ಕ ಆತನ ರಕ್ಷಣೆಗಾಗಿ ನೀರಿಗೆ ಇಳಿದಿದ್ದಾಳೆ. ಆಕೆಯೂ ನೀರಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಇಬ್ಬರ ಮೃತ ದೇಹಗಳು ಸಿಕ್ಕಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಹಿಳೆಯ ಪತಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಿಂಗಳಲ್ಲಿ 10 ಕ್ಕೂ ಅಧಿಕ ಸಾವು

ಜಿಲ್ಲೆಯಲ್ಲಿ ಕಳೆದ 1 ತಿಂಗಳ ಅವಧಿಯಲ್ಲಿ ನೀರಿನಲ್ಲಿ ಈಜಲು ಹೋಗಿ 10 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಏಪ್ರಿಲ್‌ 21 ರಂದು ಹುಬ್ಬಳ್ಳಿಯ ಒಂದೇ ಕುಟುಂಬದ 6 ಜನ ದಾಂಡೇಲಿಯಲ್ಲಿ ಮೃತಪಟ್ಟಿದ್ದರು. ಎರಡು ದಿನದ ಹಿಂದೆ ಜೊಯಿಡಾದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈಗ ಇದು 3 ನೇ ಘಟನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net