ವಾಂತಿ, ಭೇದಿಯಿಂದ ಬಳಲುತ್ತಿದ್ದ ಬಾಲಕ ಸಾವು

HUN-APR-15-2(KALIKUIMAR NAYAKA)
ಕಲಿಕುಮಾರ್ ನಾಯಕ
Published on

ಹುಣಸೂರು: ತಾಲೂಕಿನ ಅಬ್ಬೂರು ಗ್ರಾಮದಲ್ಲಿ ವಾಂತಿಭೇದಿಯಿಂದ ಬಳಲುತ್ತಿದ್ದ ಸಹೋದರರಿಬ್ಬರ ಪೈಕಿ ಹಿರಿಯ ಸಹೋದರ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾನೆ.


ಅಬ್ಬೂರು ಗ್ರಾಮದ ಅಶೋಕ-ಸವಿತಾ ದಂಪತಿ ಹಿರಿಯ ಪುತ್ರ, 6ನೇ ತರಗತಿ ವಿದ್ಯಾರ್ಥಿ ಕಲಿಕುಮಾರ್ ನಾಯಕ(13) ಮೃತಪಟ್ಟ ಬಾಲಕ. ಕಿರಿಯ ಸಹೋದರ ರಜತ್‌ಗೆ ಇನ್ನೂ ಚಿಕಿತ್ಸೆ ಮುಂದುವರಿಸಲಾಗಿದೆ. ಹನಗೋಡು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಆರೋಪ ಹಿನ್ನೆಲೆಯಲ್ಲಿ ಬಾಲಕರಿಬ್ಬರನ್ನೂ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು.


ಘಟನೆ ಕುರಿತಾಗಿ ಏ.14ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಕಳೆದ ಗುರುವಾರ ಸಹೋದರರಿಬ್ಬರೂ ವಾಂತಿ, ಭೇದಿಯಿಂದ ಬಳಲುತ್ತಿದ್ದ ಕಾರಣ ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶನಿವಾರ ಮತ್ತೆ ತಪಾಸಣೆಗೆ ಬರಲು ಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ತಿಳಿಸಿದ್ದರು. ಅಂತೆಯೇ, ಶನಿವಾರ ತೆರಳಿದ್ದ ವೇಳೆ ವೈದ್ಯರು ನೀಡಿದ ಇಂಜೆಕ್ಷನ್‌ನಿಂದಾಗಿ ಬಾಲಕರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮೈಸೂರಿನ ಚೆಲುವಾಂಬ ಆಸ್ಪತೆಗೆ ದಾಖಲಿಸಲಾಗಿತ್ತು.


ಈ ನಡುವೆ ಭಾನುವಾರ ಸಂಜೆ ಹಿರಿಯ ಸಹೋದರ ಕಲಿಕುಮಾರ್ ಮೃತಪಟ್ಟಿದ್ದಾನೆ ಎಂದು ತಂದೆ ಅಶೋಕ್ ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷೃವೇ ತಮ್ಮ ಪುತ್ರರ ಈ ಸ್ಥಿತಿಗೆ ಕಾರಣ ಎಂದು ದೂರಿದ್ದ ಅಶೋಕ್ ಮರಣೋತ್ತರ ವರದಿ ಬಂದ ಬಳಿಕ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net