

ಚಿಕ್ಕಬಳ್ಳಾಪುರ: ಸಂತೆಯಲ್ಲಿ ರಾಸುವನ್ನು ಮಾರಿದ ಹಿನ್ನೆಲೆಯಲ್ಲಿ ರೈತನಿಗೆ ಸಿಕ್ಕ ಹಣವನ್ನು ಕಳ್ಳರು ಎಗರಿಸಿದ್ದು ಇದರ ಕೈ ಚಳಕದಲ್ಲಿ ಅಪ್ರಾಪ್ತ ಬಾಲಕನ ಪಾತ್ರವಿರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಚಿಂತಾಮಣಿ ತಾಲೂಕಿನ ಆಲಂಬಗಿರಿಯ ರೈತ ಎ.ಎಂ ಶ್ರೀನಿವಾಸ(58) ಹಣ ಕಳೆದುಕೊಂಡವರು. ಚಿಂತಾಮಣಿಯ ಗಾಂಧಿ ನಗರದಲ್ಲಿ ನಡೆಯುವ ಸಂತೆಯಲ್ಲಿ 3 ಹಸುಗಳನ್ನು ಹಿಡಿದುಕೊಂಡು ಬಂದಿದ್ದು ಈ ಪೈಕಿ ಒಂದು ಹಸುವನ್ನು ಮಾರಿದರಿಂದ 73,000 ರೂ ಹಣ ಬಂದಿದ್ದು ಈ ಹಣದಲ್ಲಿ 50,000 ರೂಗಳನ್ನು ಒಂದು ಜೇಬಿನಲ್ಲಿ, ಮತ್ತೊಂದು ಜೇಬಿನಲ್ಲಿ 23000 ರೂ ಇಟ್ಟುಕೊಂಡಿದ್ದು ಇದರಲ್ಲಿ 50 ಸಾವಿರ ರೂ ಕಳ್ಳತನವಾಗಿದೆ.
3 ಹಸುಗಳ ಪೈಕಿ ಉಳಿದ 2 ಹಸುಗಳನ್ನು ಮಾರುತ್ತಿದ್ದಾಗ ಸುಮಾರು 10-12 ವರ್ಷದ ಒಬ್ಬ ಹುಡುಗ ಶ್ರೀನಿವಾಸ್ ಹತ್ತಿರ ಬಂದು ನಿಂತುಕೊಂಡಿದ್ದು ಹಣವನ್ನು ಎಗರಿಸಿಕೊಂಡು ಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಹಣ ಕಳೆದುಕೊಳ್ಳುತ್ತಿದ್ದಂತೆ ಸುತ್ತಲು ಅನುಮಾನಾಸ್ಪದ ಹುಡುಗನನ್ನು ಹುಡುಕಲು ಯತ್ನಿಸಿದ್ದು ಆತ ಪತ್ತೆಯಾಗಿಲ್ಲ. ಇದರ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.