

ಸವಣೂರ: ಬೀದಿನಾಯಿ ದಾಳಿಯಿಂದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಶ್ರೀ ಜಗದ್ಗುರು ರೇಣುಚಾರ್ಯ ನಗರದಲ್ಲಿ ಗುರುವಾರ ನಡೆದಿದೆ.
ಮಂಥನ ನಾಗರಾಜ್ ಟಿಕಾರೆ (೭) ಗಾಯಗೊಂಡ ಬಾಲಕ. ಈತ ಸ್ಥಳೀಯ ಕೆಪಿಎಸ್ ಶಾಲೆಯಲ್ಲಿ ೨ನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆಗೆ ತೆರಳಲು ಸಿದ್ಧನಾಗಿ ಮನೆ ಬಾಗಿಲಿನ ಮುಂದೆ ನಿಂತಿದ್ದಾಗ ಬೀದಿನಾಯಿಯೊಂದು ಏಕಾಏಕಿ ನಡೆಸಿ, ಎದೆಯ ಬಲಭಾಗಕ್ಕೆ ಕಚ್ಚಿದೆ. ಪರಿಣಾಂ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಕುಟುಂಬಸ್ಥರು ಸ್ಥಳೀಯ ತಾಲೂಕು ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಹುಬ್ಬಳ್ಳಿ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ.
ಬೀದಿನಾಯಿಗಳ ಉಪಟಳದಿಂದ ಮಕ್ಕಳು ಶಾಲೆಗೆ ಹೋಗಲು ಸುರಕ್ಷಿತವಿಲ್ಲದ ಪರಿಸ್ಥಿತಿ ಎದುರಾಗುತ್ತಿದೆ. ಬೀದಿನಾಯಿಗಳ ಉಪಟಳದ ಕುರಿತು ಪುರಸಭೆಗೆ ಹಾಗೂ ಸದಸ್ಯರಿಗೆ ಹಲವಾರು ಬಾರಿ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪುರಸಭೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.