

ಮಂಗಳೂರು: ಸೈಕಲ್ ತುಳಿದುಕೊಂಡು ಹೋದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾದ ಪ್ರಕರಣ, ಆತ ಅಜ್ಜಿ ಮನೆಯಲ್ಲಿ ಪತ್ತೆಯಾಗುವುದರೊಂದಿಗೆ ಸುಖಾಂತ್ಯಗೊಂಡಿದೆ.
ಮಂಗಳೂರಿನ ದೇರೆಬೈಲು ಕೊಂಚಾಡಿ ಲ್ಯಾಂಡ್‌ಲಿಂಕ್ಸ್ ನಿವಾಸಿ, ಬಿಜಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸೂರಜ್ ಗುರುವಾರ ಮಧ್ಯಾಹ್ನ ಮನೆಯಿಂದ ಸೈಕಲ್‌ನಲ್ಲಿ ಇಲ್ಲೇ ಹೋಗಿ ಬರುವುದಾಗಿ ತಾಯಿಗೆ ಹೇಳಿ ಹೊರಟಿದ್ದ.
ತುಂಬಾ ಹೊತ್ತಾದರೂ ಬಾರದಿದ್ದಾಗ ಹೆದರಿದ ಮನೆಯವರು ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೆ, ವಾಟ್ಸಾೃಪಿನಲ್ಲೂ ಸಂದೇಶ ಶೇರ್ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಅಷ್ಟು ಹೊತ್ತಿಗೆ ಕಲ್ಲಡ್ಕ ವರೆಗೂ ಸೈಕಲ್ ತುಳಿದ ಈ ಪೋರ ಅಲ್ಲಿಂದ ಯಾರದೋ ವಾಹನದಲ್ಲಿ ಸೈಕಲ್ ಹಾಕಿಕೊಂಡು ವಿಟ್ಲ ಸಮೀಪದ ಗೋಳ್ತಮಜಲು ಎಂಬಲ್ಲಿಗೆ ತನ್ನ ಅಜ್ಜಿ ಮನೆಗೆ ತಲುಪಿದ್ದಾನೆ.