ಐದು ವರ್ಷಗಳ ನಂತರ ಕುಟುಂಬ ಸೇರಿದ ಬಾಲಕ

jyp2 (1)
Published on

ಜಯಪುರ: ಕಳೆದ 5 ವರ್ಷಗಳಿಂದ ತಂದೆಯಿಂದ ದೂರವಿದ್ದ ಬಾಲಕನೊಬ್ಬ ಜಯಪುರ ಪೋಲೀಸರ ವಿಶೇಷ ಪ್ರಯತ್ನದಿಂದ ಮರಳಿ ತನ್ನ ತಂದೆಯೊಂದಿಗೆ ಸೇರಿಸಿದ ಜಯಪುರ ಪೋಲೀಸರ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

ಕೊಪ್ಪ ತಾಲೂಕಿನ ತೆಂಗಿನ ಮನೆ ಸಮೀಪದ ಮುಂಡಗೋಡಿನ ಭುವನ್(11) ಮರಳಿ ತಂದೆಯನ್ನು ಸೇರಿದ ಬಾಲಕ. ತೆಂಗಿನ ಮನೆಯ ಮಂಜುನಾಥ್ ಹಾಗೂ ಶೋಭಾ ದಂಪತಿಗೆ ಇಬ್ಬರು ಮಕ್ಕಳಿದ್ದರು. 5 ವರ್ಷಗಳ ಹಿಂದೆ ದಂಪತಿಗಳ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರೆ ಬೇರೆ ಜೀವನ ನಡೆಸುತ್ತಿದ್ದರು. ಹೆಣ್ಣು ಮಗು ತಂದೆಯೊಂದಿಗೆ ಹಾಗೂ ಗಂಡು ಮಗು ತಾಯಿ ಶೋಭಾಳೊಂದಿಗೆ ವಾಸವಾಗಿತ್ತು. ತಾಯಿ ಶೋಭಾ ಮಗುವನ್ನು ಬೇರೆಯವರ ಬಳಿ ಬಿಟ್ಟು ಬೇರೆ ಸಂಸಾರ ನಡೆಸುತ್ತಿರುವುದರಿಂದ ಬಾಲಕ ಕಳೆದ ನಾಲ್ಕು ವರ್ಷಗಳಿಂದ ಬೇರೊಬ್ಬರ ಬಳಿ ಬೆಳೆಯುತ್ತಾ ತಂದೆ ತಾಯಿ ಪ್ರೀತಿಯಿಂದ ವಂಚಿತನಾಗಿ ಅನಾಥನಾಗಿದ್ದನು.

ಇದನ್ನು ಗಮನಿಸಿದ ತಂದೆ ಮಂಜುನಾಥ್ ಮಗುವನ್ನು ನನ್ನ ಸುಪರ್ದಿಗೆ ನೀಡಲು ಕೋರಿ ಜಯಪುರ ಪೊಲೀಸರಿಗೆ ದೂರು ನೀಡಿದ್ದರು. ಅರ್ಜಿ ಗಮನಿಸಿದ ಜಯಪುರ ಎಸ್‌ಐ ಅಂಬರೀಷ್ ಪ್ರಕರಣದ ವಿವರಗಳನ್ನು ಜಿಲ್ಲಾ ಮಕ್ಕಳ ಕಲ್ಯಾಣಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾ ಮಕ್ಕಳ ಕಲ್ಯಾಣಧಿಕಾರಿಗಳ ಆದೇಶದಂತೆ ಹೊರನಾಡಿನ ವಸತಿ ಶಾಲೆಯಲಿದ್ದ ಬಾಲಕನನ್ನು ತಂದೆ ಜತೆಗೆ ಸೇರಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಗ್ರಾಮಸ್ಥ ಪ್ರವೀಣ್ ಮಾತನಾಡಿ, ಸಾಮಾನ್ಯವಾಗಿ ಸಮಸ್ಯೆಗಳು ಬಂದಾಗ ಬಹುತೇಕ ಅಧಿಕಾರಿಗಳು ನಮ್ಮ ಇಲಾಖೆಗೆ ಸೇರಿಲ್ಲ ಎಂದು ಕೈತೊಳೆದುಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ತಮ್ಮ ವ್ಯಾಪ್ತಿಯ ದೂರು ಅಲ್ಲದಿದ್ದರೂ ತಂದೆ ತಾಯಿ ಪ್ರೀತಿಯಿಂದ ವಂಚಿತನಾಗಿದ್ದ ಬಾಲಕನನ್ನು ತಂದೆ ಜತೆಗೆ ಸೇರಿಸಿರುವುದು ಶ್ಲಾಘನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net