ಪಬ್‌ಜಿ ಆಡಿ ಕೂದಲು ಕತ್ತರಿಸಿದ ವಿದ್ಯಾರ್ಥಿ!

pubg2
Published on

ಉಪ್ಪಿನಂಗಡಿ (ದ.ಕ.): ಪಬ್‌ಜಿ ಆಟ ಹಿನ್ನೆಲೆ ಉಳ್ಳಾಲದಲ್ಲಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡ ಎರಡು ದಿನಗಳ ನಂತರ, ಉಪ್ಪಿನಂಗಡಿಯ ಖಾಸಗಿ ಪ್ರೌಢಶಾಲಾ ವಿದ್ಯಾರ್ಥಿ ಪಬ್ ಜಿ ಆಟದಲ್ಲಿ ತಲೆಕೂದಲನ್ನು ಕತ್ತರಿಸಿಕೊಂಡಿದ್ದಾನೆ.

9ನೇ ತರಗತಿ ವಿದ್ಯಾರ್ಥಿ ತಲೆಕೂದಲನ್ನು ವಿಕಾರವಾಗಿ ಕತ್ತರಿಸಿರುವುದನ್ನು ಗಮನಿಸಿದ ಪಾಲಕರು ಆತನನ್ನು ಪ್ರಶ್ನಿಸಿದರು. ಮೊದಲು ಸುಳ್ಳು ಕತೆ ಹೆಣೆಯಲು ಪ್ರಯತ್ನಿಸಿದ ಬಾಲಕ, ಮತ್ತಷ್ಟು ವಿಚಾರಿಸಿದಾಗ ಪಬ್‌ಜಿ ಆಟದಲ್ಲಿ ಮಗ್ನನಾಗಿ ಮೊಬೈಲ್ ಮುಂದೆ ತಲೆ ಕೂದಲು ತೆಗೆದುಕೊಂಡದ್ದಾಗಿ ತಿಳಿಸಿದ್ದಾನೆ.

ಘಟನೆಯನ್ನು ಮನೆಯವರು ಪೊಲೀಸರ ಗಮನಕ್ಕೆ ತಂದಾಗ ಆಟದಲ್ಲಿ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಪತ್ತೆಯಾಗಿದೆ. ಎಲ್ಲ ವಿದ್ಯಾರ್ಥಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ವಿದ್ಯಾರ್ಥಿಯ ಪಾಲಕರೊಬ್ಬರು ಇಂತಹ ಹುಚ್ಚಾಟಕ್ಕೆ ಆನ್‌ಲೈನ್ ಶಿಕ್ಷಣದ ಮೊಬೈಲ್‌ಗಳೇ ಕಾರಣವೆಂದು ಪೊಲೀಸರ ಮುಂದೆ ದೂರಿದ್ದಾರೆ. ಮಕ್ಕಳಿಗೆ ಕರೊನಾ ವೈರಸ್ ತಗುಲಿದರೂ ಚಿಂತೆ ಇಲ್ಲ, ದಯವಿಟ್ಟು ಶಾಲೆಯಲ್ಲೇ ಶಿಕ್ಷಣ ಕೊಡಿಸಿ. ಮೊಬೈಲ್‌ನಲ್ಲೇ ಮಕ್ಕಳು ಶಿಕ್ಷಣ ನೆಪದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಮನವಿ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net