

ಬೆಂಗಳೂರು: ನಗರದಲ್ಲಿ ಡೆಂಘೆ ಪ್ರಕರಣಗಳು 2,500ಕ್ಕೆ ಏರಿಕೆಯಾಗಿದ್ದು, ಹನ್ನೊಂದು ವರ್ಷದ ಗಗನ್ ಎಂಬ ಬಾಲಕ ಸೋಂಕಿನಿಂದ ಮೃತಪಟ್ಟಿದ್ದಾನೆ. ಈ ಮಾಹಿತಿಯನ್ನು ಪಾಲಿಕೆ ಅಧಿಕಾರಿಗಳು ದೃಢಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಗಗನ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೆ ಬಾಲಕ ಅಸುನೀಗಿದ್ದಾನೆ. ಪಾಲಿಕೆ ಕೈಗೊಂಡ ತಪಾಸಣೆಯಲ್ಲಿ ಈ ವಿಷಯ ದೃಢಪಟ್ಟಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ತಿಳಿಸಿದ್ದಾರೆ.
ನಿಯಮದಂತೆ ಬಾಲಕ ಸಾವಿನ ಡೆತ್ ಆಡಿಟ್‌ಅನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಅಧಿಕೃತ ಸಾವಿನ ವಿಷಯವನ್ನು ವರದಿಯಲ್ಲಿನ ಅಂಶಗಳನ್ನು ಆಧರಿಸಿ ಆರೋಗ್ಯ ಇಲಾಖೆಯೇ ಘೋಷಿಸಲಿದೆ. ಬಾಲಕನ ಸಾವಿಗೆ ನಿಖರ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ಶೀಘ್ರವೇ ಬಹಿರಂಗಪಡಿಸಲಿದ್ದಾರೆ. ಇದರ ಹೊರತಾಗಿಯೂ ನಗರದೆಲ್ಲೆಡೆ ಡೆಂಘೆ ಸಂಬಂಧ ವಿವಿಧ ಮುಂಜಾಗ್ರತಾ ಕಾರ್ಯವನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.