

ದೊಡ್ಡಬಳ್ಳಾಪುರ : ನಗರದ ಮುತ್ತೂರು ವಾರ್ಡ್ನಲ್ಲಿ ಶುಕ್ರವಾರ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ರಸ್ತೆಯೂದ್ದಕ್ಕೂ ಮೆರವಣಿಗೆಗೆ ತರಲಾಗಿದ್ದ ಗಾಡಿಯ ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲಿಟ್ಟಿದ್ದ ಪಟಾಕಿಗಳು ಸಿಡಿದು ಮುತ್ತೂರಿನ ತನುಷ್ ರಾವ್ (15) ಮೃತಪಟ್ಟು, ಪೊಲೀಸ್ ಪೇದೆ ಸೇರಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮುತ್ತೂರಿನ ಗಣೇಶ್ (16) ಯೋಗೇಶ (15), ಚೇತನ್ ಶಾವಿ (13), ಯುವಕ ಮುನಿರಾಜು (27) ಪವರ್ ಲಿಫ್ಟ್ ಚಾಲಕ ನಾಗರಾಜು (35) ಹಾಗೂ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೇದೆ ಜಾಕಿರ್ ಹುಸೇನ್ಗೆ ಗಾಯಗಳಾಗಿವೆ. ಎಲ್ಲರೂ ಮಣಿಪಾಲ್ ಆಸ್ಪತ್ರೆ ಹಾಗೂ ಆದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10ಕ್ಕೂ ಹೆಚ್ಚು ಯುವಕರಿಗೆ ಗಾಯಗಳಾಗಿವೆ.
ಫ್ರೆಂಡ್ಸ್ ವಿನಾಯಕ ಗ್ರೂಪ್ನಿಂದ ಗಣೇಶ ವಿಸರ್ಜನೆಗೆಂದು ಟ್ರಾ$್ಯಕ್ಟರ್ನಲ್ಲಿ ಮೆರವಣಿಗೆ ಬರುವಾಗ ಚಿಕ್ಕ ಕ್ರೇನ್ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳು ಏಕಾಏಕಿ ಸ್ಫೋಟಗೊಂಡು ಅವಡ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾದಿಕ್ ಪಾಷಾ, ಅಮರೇಶ್ಗೌಡ, ನವೀನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮುತ್ತೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.