ಗೇಟ್ ಮುರಿದುಬಿದ್ದು ಬಾಲಕ ಸಾವು: ವರದಿ ಸಲ್ಲಿಸಲು ವಾರದ ಗಡುವು

Vijayavani-Featured-Image
Published on

ಬೆಂಗಳೂರು: ಮಲ್ಲೇಶ್ವರದ ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದುಬಿದ್ದು ಬಾಲಕನ ಸಾವಿಗೆ ಕಾರಣವಾದ ಪ್ರಕರಣದ ತನಿಖೆಗೆ ಪಾಲಿಕೆಯ ಮೂವರು ಹಿರಿಯ ಇಂಜಿನಿಯರ್‌ಗಳನ್ನು ಒಳಗೊಂಡಂತೆ ಮೂವರ ಸಮಿತಿ ರಚಿಸಿದ್ದು, ಈ ತಿಂಗಳ 30ರೊಳಗೆ ವರದಿ ನೀಡುವಂತೆ ಗಡುವು ನೀಡಲಾಗಿದೆ.

ಭಾನುವಾರ ದುರ್ಘಟನೆಯಲ್ಲಿ 11 ವರ್ಷದ ಬಾಲಕ ನಿರಂಜನ್ ಮೃತಪಟ್ಟ ಬಳಿಕ ಪಾಲಿಕೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಪ್ಲೇಗ್ರೌಂಡ್ ನಿರ್ವಹಣೆ ಮಾಡದ ಕಾರಣ ತುಕ್ಕು ಹಿಡಿದಿದ್ದ ಗೇಟ್ ಬಾಲಕನ ಮೇಲೆ ಬಿದ್ದು ಆತ ಸಾವಿಗೀಡಾಗಿದ್ದು, ಪಾಲಿಕೆಯ ನಿರ್ಲಕ್ಷ್ಯ ಕಾರಣವೆಂದು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸಂಸ್ಥೆ ಎಚ್ಚೆತ್ತುಕೊಂಡಿದೆ.

ಪ್ರಕರಣ ನಡೆದಿರುವುದಕ್ಕೆ ಸೋಮವಾರ ವಿಷಾದ ವ್ಯಕ್ತಪಡಿಸಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಟದ ಮೈದಾನದ ಕಬ್ಬಿಣದ ಗೇಟ್ 4 ವರ್ಷದ ಹಿಂದೆ ಅಳವಡಿಸಲಾಗಿತ್ತು. ಆ ವೇಳೆ ಗುತ್ತಿಗೆದಾರನಿಂದ ಗುಣಮಟ್ಟದ ಕಾಮಗಾರಿ ನಡೆಸಲಾಗಿತ್ತೆ, ಯಾವ ಸಾಮಗ್ರಿ ಬಳಸಲಾಗಿತ್ತು ಹಾಗೂ ತಾಂತ್ರಿಕ ಅಂಶಗಳನ್ನಾಧರಿಸಿ ತನಿಖೆ ನಡೆಸಿ ವರದಿ ನೀಡುವಂತೆ ಪಾಲಿಕೆಯ ಕೆರೆ ವಿಭಾಗ, ಟಿವಿಸಿಸಿ ಹಾಗೂ ಗುಣಮಟ್ಟ ನಿಯಂತ್ರ ವಿಭಾಗದ ಮುಖ್ಯ ಇಂಜಿನಿಯರ್‌ಗಳು ಒಳಗೊಂಡ ಸಮಿತಿಗೆ ಸೂಚಿಸಲಾಗಿದೆ ಎಂದರು.

ಗೇಟ್ ನಿರ್ವಹಣೆ ಮಾಡದಿರುವುದರಿಂದ ಘಟನೆ ನಡೆದಿರುವುದಾಗಿ ಸಾರ್ವಜನಿಕರು ದೂರಿದ್ದು, ಈ ವಿಚಾರವಾಗಿಯೂ ಸಮಿತಿಯು ಸ್ಥಳಪರಿಶೀಲನೆ ವೇಳೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಿದೆ. ಎಲ್ಲ ಅಂಶಗಳನ್ನು ಆಧರಿಸಿ ವರದಿ ಸಲ್ಲಿಕೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಪರಿಹಾರ ಬಿಡುಗಡೆ ಡಿಸಿಎಂ ವಿವೇಚನೆಗೆ:

ದುರ್ಘಟನೆಯಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಮಾನವೀಯತೆ ಆಧರಿಸಿ ಪರಿಹಾರ ನೀಡುವಂತೆ ಮನವಿ ಬಂದಿದೆ. ಇದನ್ನು ಡಿಸಿಎಂ ಗಮನಕ್ಕೆ ತಂದಿದ್ದು, ಶೀಘ್ರ ನಿರ್ಧಾರ ಹೊರಬೀಳಬಹುದು ಎಂದು ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net