ಮಾಗಡಿ: ಪಟ್ಟಣದ ಖಾಸಗಿ ಶಾಲೆಗೆ ಸೇರಿದ ಶಾಲಾ ವಾಹನದಲ್ಲಿ ಶುಕ್ರವಾರ ಸಂಜೆ ಮನೆಗೆ ಮರಳುವ ವೇಳೆ ಹುಚ್ಚಹನುಮೇಗೌಡನ ಪಾಳ್ಯ ಗ್ರಾಮದ ಬಳಿ ವಾಹನದ ಬಾಗಿಲಿನಿಂದ ಆಯತಪ್ಪಿ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ.
ರಜತ್ (7) ಮೃತ ಬಾಲಕ. ಈತ ಎಸ್ಬಿಎಸ್ ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿದ್ದಾನೆ. ತಾಲೂಕಿನ ಹೊಸಪಾಳ್ಯ ಜನತಾ ಕಾಲಜಿ ನಿವಾಸಿ ಲೋಕೇಶ್ ಎಂಬುವರ ಪುತ್ರನಾಗಿರುವ ಮೃತ ಬಾಲಕ, ನಿತ್ಯ ಶಾಲಾ ವಾಹನದಲ್ಲೇ ಸಂಚರಿಸುತ್ತಿದ್ದ.
ವಿದ್ಯಾರ್ಥಿ ಬಿದ್ದುದನ್ನು ಕಂಡ ಮೃತ ಬಾಲಕನ ಸಹೋದರಿ ದುರ್ಷಿತ ವಾಹನ ನಿಲ್ಲಿಸುವಂತೆ ಚಾಲಕನಿಗೆ ಕೇಳಿಕೊಂಡರೂ ಸ್ಥಳದಲ್ಲಿ ನಿಲ್ಲಿಸದೆ ದೂರದಲ್ಲಿ ನಿಲ್ಲಿಸಿದ್ದಾನೆ. ವಾಹನದ ಬಾಗಿಲು ಮುಚ್ಚದೆ ಇರುವುದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿ ದುರ್ಷಿತ ದೂರಿದ್ದಾರೆ. ಕೊಳ್ಳೆಗಾಲದ ಹನ್ನೂರು ಪಟ್ಟಣದ ಲೋಕೇಶ್ ಗಾರೆ ಕೆಲಸ ಮಾಡಿಕೊಂಡು ಕಳೆದ 4 ವರ್ಷದಿಂದ ಮಾಗಡಿ ತಾಲೂಕಿನ ಹೊಸಪಾಳ್ಯ ಜನತಾ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಾಹನ ಚಾಲಕ ವಿನೋದ್ ಶಾಲೆ ವಾಹನದಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.