

ಹುಬ್ಬಳ್ಳಿ: ಕೆರೆಗೆ ಈಜಲು ಹೋದ ಮೂವರು ಸ್ನೇಹಿತರಲ್ಲಿ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಧಾರುಣ ಘಟನೆ ನಗರದ ಉಣಕಲ್ ಕೆರೆಯಲ್ಲಿ ಬುಧವಾರ ಸಂಭವಿಸಿದೆ.
ಇಲ್ಲಿಯ ಬೆಂಗೇರಿ ನಿವಾಸಿ ಚೇತನ ಕಣಕನ್ನವರ (15) ಮೃತ ಬಾಲಕ. ಬೆಂಗೇರಿಯ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಈತ, ತನ್ನ ಸ್ನೇಹಿತರ ಜತೆಗೂಡಿ ಈಜಲು ಬುಧವರ ಸಂಜೆ ಉಣಕಲ್ ಕೆರೆಗೆ ತೆರಳಿದ್ದ. ಅಲ್ಲೇ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು, ಕೆರೆಯಲ್ಲಿ ಈಜಲು ಹೋಗಬೇಡಿ, ಅಪಾಯ ಇದೆ ಎಂದು ಬಾಲಕರಿಗೆ ಬುದ್ದಿ ಮಾತು ಹೇಳಿದ್ದರಂತೆ. ಆದರೂ ಅವರ ಮಾತು ಕೇಳದೇ ಈಜಲು ಕೆರೆಗೆ ಇಳಿದ ಪರಿಣಾಮ ಯುವಕ ಚೇತನ ಮುಳುಗಿ ಮೃತಪಟ್ಟಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಿನ್ನೆ ಸಂಜೆಯಿಂದಲೂ ಯುವಕನ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಗುರುವಾರ ಬೆಳಗ್ಗೆ ಶವ ಪತ್ತೆಯಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.