

ತರೀಕೆರೆ: ಬೆಟ್ಟದಹಳ್ಳಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟು 11ಮಂದಿ ಗಾಯಗೊಂಡಿದ್ದಾರೆ.
ಗುಬ್ಬಿ ಮೂಲದ ಪ್ರಮೋದ್ (7) ಮೃತ ದುರ್ದೈವಿ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೋಣೆ ಮಾದನಹಳ್ಳಿ ಕಾಲನಿ ನಿವಾಸಿಗಳಾದ ಮಹಾದೇವಮ್ಮ (30), ಭಾಗ್ಯ(45), ಮಣಿ ರಂಗಯ್ಯ (50) ಮಾತ್ರವಲ್ಲದೆ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ವಾಜಪೇಯಿ ನಗರ ನಿವಾಸಿ ನಿರ್ಮಲಾ (60), ಬೆಂಗಳೂರು ರಾಮಚಂದ್ರಪುರದ ಅಂಬಿಕಾ (60), ಶಿವಮೊಗ್ಗದ ನಾಗರಾಜು (52), ಸೊರಬ ತಾಲೂಕು ಯಲ್ಲವಳ್ಳಿಯ ಪಾಲಾಕ್ಷ (28), ಸಾಗರ ತಾಲೂಕಿನ ಸಿರವಂತೆ ಗ್ರಾಮದ ರವೀಂದ್ರ (42), ಸಾಗರ ಮೂಲದ ಸಚಿನ್ (25), ಭದ್ರಾವತಿ ಮೂಲದ ಭಾಗ್ಯಲಕ್ಷ್ಮೀ (54),ಹರ್ಷಿದ್ ಆಲಿ (38) ಚನ್ನಗಿರಿ ತಾಲೂಕಿನ ಚೆನ್ನಾಪುರ ನಿವಾಸಿ ಸುರೇಶ ಗಾಯಗೊಂಡವರು.
ಬುಧವಾರ ಬೆಳಗ್ಗೆ ಬೆಂಗಳೂರು ಕಡೆಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಬೆಟ್ಟದಹಳ್ಳಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಸಲುವಾಗಿ ಅಳವಡಿಸಿರುವ ಡಿವೈಡರ್‌ಗೆ ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗುಬ್ಬಿ ಮೂಲದ ಬಾಲಕ ತೀವ್ರ ಗಾಯಗೊಂಡ ಪರಿಣಾಮ ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ಸಣ್ಣ ಪುಟ್ಟ ಗಾಯಗೊಂಡಿದ್ದ 11 ಮಂದಿ ಪೈಕಿ 7 ಮಂದಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದ ನಾಲ್ವರು ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ.