ವೈದ್ಯರಿರದೆ ಚಿಕಿತ್ಸೆ ಸಿಗದೆ ಸಾವಿಗೀಡಾದ ಬಾಲಕ; ಆಸ್ಪತ್ರೆ ಎದುರು ಬೆಂಕಿ ಹಚ್ಚಿ ಸಾರ್ವಜನಿಕರಿಂದ ಆಕ್ರೋಶ

Boy
Published on

ಕಲಬುರಗಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರದ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ್ದರಿಂದ ಬಾಲಕನೊಬ್ಬ ಅನ್ಯಾಯವಾಗಿ ಸಾವಿಗೀಡಾಗುವಂತಾಗಿದ್ದು, ಸಿಟ್ಟಿಗೆದ್ದ ಸಾರ್ವಜನಿಕರು ಆಸ್ಪತ್ರೆ ಮುಂದೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೆಲೋಗಿ ನಿವಾಸಿ ಗುರು ಮಂಗಾ (10) ಎಂಬಾತ ಸಾವಿಗೀಡಾದ ಬಾಲಕ. ಗುರು ಇಂದು ಮಧ್ಯಾಹ್ನ ಟ್ರ್ಯಾಕ್ಟರ್ ಮೇಲಿದ್ದ ಬಿದ್ದು ಗಾಯಗೊಂಡಿದ್ದ. ಗಾಯಾಳು ಬಾಲಕನನ್ನು ನೆಲೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು.

ಆದರೆ ಆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರದ್ದರಿಂದ ತಕ್ಷಣಕ್ಕೆ ಚಿಕಿತ್ಸೆ ಸಿಕ್ಕಿರಲಿಲ್ಲ. ಬಳಿಕ ಆತನನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ಇದರಿಂದ ಸಿಟ್ಟಾದ ಸಾರ್ವಜನಿಕರು ಆಸ್ಪತ್ರೆಗೆ ಮುಳ್ಳು ಇಟ್ಟು, ಟಯರ್​​ಗೆ ಬೆಂಕಿ ಹಚ್ಚಿದ್ದಲ್ಲದೆ, ಆಸ್ಪತ್ರೆ ಬಳಿ ನಿಲ್ಲಿಸಿದ್ದ ಆ್ಯಂಬುಲೆನ್ಸ್​​ಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ.

ನೆಲೋಗಿ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರ ತವರೂರಾಗಿದ್ದು, ಅಲ್ಲೇ ಇಂಥ ಅವ್ಯವಸ್ಥೆ ಉಂಟಾಗಿರುವ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net