

ದಾಂಡೇಲಿ: ಇಲ್ಲಿನ ಗಾಂಧಿನಗರದ ತನ್ನ ಮನೆಯಿಂದ ಗುರುವಾರ ರಾತ್ರಿ ಕಾಣೆಯಾಗಿದ್ದ ಬಾಲಕನ ಶವ ನಿರ್ಮಾಣ ಹಂತದ ಕಟ್ಟಡದ ಟ್ಯಾಂಕ್ ಒಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಗಾಂಧಿನಗರದ ಕಂಜರಬಾಟ ನಿವಾಸಿ ಸುನಿಲ ಕಂಜಾರಬಾಟ ಎಂಬುವವರ 6 ವರ್ಷದ ಪುತ್ರ ಯಶ್ ಸುನಿಲ ಕಂಜಾರಬಾಟ ಮೃತಪಟ್ಟ ಬಾಲಕ.
ಗುರುವಾರ ಸಾಯಂಕಾಲ ಮನೆಯ ಹೊರಗೆ ಕೇಳಿ ಬರುತ್ತಿದ್ದ ಡಿಜೆ ಶಬ್ದ ಕೇಳಿ ಅದನ್ನು ನೋಡಲು ಅತ್ತ ಓಡಿದ ಬಾಲಕ ನಾಪತ್ತೆಯಾಗಿದ್ದ.
ಪಾಲಕರು ಮಗುವಿಗಾಗಿ ಸುತ್ತಲೂ ಹುಡುಕಿದ್ದು, ನಂತರ ಮನೆಯ ಹತ್ತಿರ ನೂತನವಾಗಿ ನಿರ್ಮಾಣವಾಗುಗುತ್ತಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಮೇಲೆ ಫ್ಲೈವುಡ್ ಮುಚ್ಚಿದ್ದು, ಅದರ ಒಳಗೆ ಮಗುವಿನ ಶವ ಪತ್ತೆಯಾಗಿದೆ.
ಬಾಲಕನ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ದಾಂಡೇಲಿ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.