

ಚಿತ್ರದುರ್ಗ: ಮತ್ತೆ ಕಲ್ಯಾಣ ರಾಜ್ಯ ನಿರ್ಮಾಣದತ್ತ ನಾವುಗಳು ಶ್ರಮಿಸ ಬೇಕಿದೆ ಎಂದು ಹೆಬ್ಬಾಳ ವಿರಕ್ತ ಮಠದ ಶ್ರೀ ರುದ್ರೇಶ್ವರ ಸ್ವಾಮೀಜಿ ಹೇಳಿ ದರು. ಶರಣಸಂಸ್ಕೃತಿ ಉತ್ಸವ 2022ರ ಅಂಗವಾಗಿ ಬುಧವಾರ ಸಂಜೆ ಶ್ರೀ ಮಠದ ಅನುಭವಮಂಟಪದಲ್ಲಿ ಏರ್ಪಡಿಸಿದ್ದ‘ಬಸವತತ್ತ್ವ- ಸಾರ್ವಕಾಲಿಕ ಪ್ರಸ್ತುತತೆ’ ವಿಚಾರಸಂಕಿರಣದ ನೇತೃತ್ವವ ವಹಿಸಿ ಮಾತನಾಡಿದ ಶ್ರೀಗಳು, ಬಸವಣ್ಣನವರು 12ನೇಯ ಶತಮಾನದಲ್ಲಿ ಕಂಡಿದ್ದ ಕಲ್ಯಾಣ ರಾಜ್ಯದ ಕನಸು ದೇಶ,ರಾಜ್ಯ ಮತ್ತು ಜಿಲ್ಲೆಯಲ್ಲಿ ನನಸಾಗ ಬೇಕಿದೆ ಎಂದರು.
ಸಮ್ಮಖ ವಹಿಸಿದ್ದ ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಅನೇಕ ವಿಚಾರಗಳು ವೇದಿಕೆಗೆ ಸೀಮಿತವಾಗುತ್ತಿವೆ. ಇದಕ್ಕೆ ಉದಾಹರಣೆ ಮಹಿಳೆಯರಿಗೆ ಶೇ.33 ಮೀಸಲಾತಿ. ಅದನ್ನು ನೀಡಲು ಸಾಧ್ಯವಾಗಿಲ್ಲ.
ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ತನ್ನ 8ನೇಯ ವಯಸ್ಸಿನಲ್ಲೇ ಅಕ್ಕನಿಗೆ ಇಲ್ಲದ ಉಪನಯನ ತನಗೂ ಬೇಡವೆಂದು ಮಹಿಳೆಯರ ಪರ ಧ್ವನಿ ಎತ್ತಿದ್ದರು. ಮಹಿಳೆಯರ ಧಾರ್ಮಿಕ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ್ದರು. ರೈತಪರ ಚಿಂತನೆ,ದಾಸೋಹದ ಮಹತ್ವವನ್ನು,ಕಾಯಕದ ಶ್ರೇಷ್ಠತೆಯನ್ನು ತಿಳಿಸಿಕೊಟ್ಟಿದ್ದರೆಂದರು.
ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜಕ್ಕೆ ಬಸವ ತತ್ತ್ವಗಳ ಪ್ರಸ್ತುತತೆ ತುಂಬಾ ಮುಖ್ಯವಾಗಿದೆ. ಭವಿಷ್ಯದಲ್ಲಿ ಭಾರತವೊಂದೇ ಅಲ್ಲ ಇಡೀ ಜಗತ್ತಿಗೆ ಸಮಾನತೆಯ ಬದುಕು ಬೇಕಾಗಿದೆ. ಅದಕ್ಕೆ ಬಸವತತ್ತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣ ಎಂದರೆ ಬದಲಾವಣೆಯ ಬೆಳಕು. ಬಸವತತ್ತ್ವದ ಪ್ರಸ್ತುತತೆ ಸೂರ್ಯಚಂದ್ರ ಇರುವವರೆಗೂ ಇರುತ್ತದೆ. ಅಂತಹ ಸಾಮರ್ಥ್ಯ ವಚನಗಳಿಗೆ ಇವೆ. ಈ ಜಗತ್ತಿನ ಪ್ರಜಾಪ್ರಭುತ್ವದ ತಾಯಿ 12ನೇ ಶತಮಾನದ ಶಿವಶರಣರ ಅನುಭವಮಂಟಪವಾಗಿದೆ. ಮುರುಘಾ ಪರಂಪರೆ ಜನಪರ ಮತ್ತು ಜೀವ ಪರವಾಗಿ ಇರುವಂತಹದ್ದಾಗಿದೆ ಎಂದರು.
ವಿಷಯ ಮಂಡಿಸಿದ ಸಂಸ್ಕೃತಿ ಚಿಂತಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ,ನಮ್ಮ ನಿಮ್ಮೆಲ್ಲರಂತೆ ಇದ್ದ ಬಸವಣ್ಣ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿದರು. ಆ ಕಾರಣಕ್ಕಾಗಿಯೇ 900 ವರ್ಷಗಳ ನಂತರವೂ ಅವರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಬಸವಣ್ಣನವರು ನೇತೃತ್ವ ವಹಿಸಿಕೊಂಡಿದ್ದ ಆಂದೋಲನದ ಮಾತುಗಳು 12ನೇ ಶತಮಾನಕ್ಕೆ ಸೀಮಿತವಾಗಿರಲಿಲ್ಲ. ಅವು ಇಂದಿಗೂ ಜೀವಂತ ವಾಗಿವೆ. ಧರ್ಮ,ಸಂಸ್ಕೃತಿ,ರಾಜಕೀಯ,ಸಾಹಿತ್ಯ ಮತ್ತು ಸಮಾಜ ಈ ಐದು ಆಂದೋಲನಗಳ ರೂವಾರಿ ಬಸವಣ್ಣ.
ಸಮಾಜದ ಹಲವು ವ್ಯವಸ್ಥೆಗಳನ್ನು ದುರಸ್ತಿ ಮಾಡದಿದ್ದರೆ ದೇಶ ಉದ್ಧಾರವಾಗಲಾರದು. ಇಂದಿನ ರಾಜಕೀಯ ಉದ್ದೇಶ ದುರಾಸೆ ಗಳಿಗೆ ಬಳಕೆಯಾಗುತ್ತಿರುವುದು ಖಂಡನೀಯ. ರಾಜಪ್ರಭುತ್ವ ತಪ್ಪನ್ನು ಸಾತ್ವಿಕ ಪ್ರಭುತ್ವ ಖಂಡಿಸಿದಿದ್ದಾಗ ದುರಂತ ಸಂಭವಿಸುತ್ತದೆ. ಜಾತಿ ವ್ಯವಸ್ಥೆಯನ್ನು ದಾಟಿ ಸಮಾನತೆಯ ಸಮಾಜ ಕಟ್ಟಬೇಕಾಗಿದೆ ಎಂದು ತಿಳಿಸಿದರು.
ರಾವಂದೂರು ಶ್ರೀ ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ,ಶರಣಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಬಸವ ಕುಮಾರ ಸ್ವಾಮೀಜಿ,ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ, ಹರಗುರುಚರಮೂರ್ತಿಗಳು ಇದ್ದರು. ರಾಯಚೂರಿನ ಶ್ರೀ ಅಂಬಯ್ಯ ನೂಲಿಯವರು ವಚನಸಂಗೀತ ನಡೆಸಿಕೊಟ್ಟರು. ಮಮತಾ ತಿಪ್ಪಣ್ಣ ನಿರೂಪಿಸಿ,ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ. ವಸ್ತ್ರಮಠ್ ಸ್ವಾಗತಿಸಿದರು.