

ಪಳೆಯಂಡ ಪಾರ್ಥ ಚಿಣ್ಣಪ್ಪ ವಿರಾಜಪೇಟೆ
ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಟೋಳಿ ಗಾಮ ಮೂಲಭೂತ ಸವಲತ್ತು ಕೊರತೆಯಿಂದ ಬಳಲುತ್ತಿದೆ. ರಸ್ತೆ, ವಿದ್ಯುತ್, ನೀರು, ಬೀದಿ ದೀಪದ ಸಮಸ್ಯೆಯಿಂದ ಕುಗ್ರಾಮವಾಗಿದೆ. ಕೂಗಳತೆ ದೂರದಲ್ಲಿ ವಿಾಜಪೇಟೆ ತಾಲೂಕು ಕೇಂದ್ರ ಇದ್ದರೂ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ.
ಕನ್ನಡದ ನಂಬರ್ ೧ ಕನ್ನಡ ದಿನ ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಗ್ರಾಮ ಸಂಚಾರದಲ್ಲಿ ಬೇಟೋಳಿ ಗ್ರಾಮದ ಚಿತ್ರಣ ಅನಾವರಣಗೊಂಡಿತು. ವಿರಾಜಪೇಟೆ ಪಟ್ಟಣ ೫ ರಿಂದ ೬ ಕಿಲೋ ಮೀಟರ್ ದೂರದಲ್ಲಿದೆ. ಹೀಗಿದ್ದರೂ, ಹೆಗ್ಗಳ ಗ್ರಾಮದಿಂದ ವಿದ್ಯಾರ್ಥಿಗಳು ನಡೆದು ಕೊಂಡು ಶಾಲಾ- ಕಾಲೇಜಿಗೆ ಹೋಗುತ್ತಾರೆ. ಗ್ರಾಮದ ಕೆಲವು ಭಾಗಗಳಲ್ಲಿ ರಸ್ತೆನೇ ಇಲ್ಲ. ವನ್ಯಪ್ರಾಣಿ ಉಪಟಳ ಇಲ್ಲದಿದ್ದರೂ ಕೆಲವು ದಿನಗಳ ಹಿಂದೆ ಹುಲಿ ಬಂದು ಹೋಗಿರುವ ಹೆಜ್ಜೆ ಗುರುತು ಕಂಡಿದೆ.
ಬೇಟೋಳಿ ಗ್ರಾಮ ಅಂದಾಜು ೧೦ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಹೆಚ್ಚು ಮಳೆಯಾಗುತ್ತಿದೆ. ೨ ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿದ್ದು, ೧,೯೦೦ ಮತದಾರರಿದ್ದಾರೆ.
ವಿರಾಜಪೇಟೆ ಗಾಂಧಿನಗರದಿಂದ ಹೆಗ್ಗಳ ಜಲಕೊಲ್ಲಿ, ಗುಂಡಿಗೆರೆ ಕಿರಿಯ ಪ್ರಾಥುಕ ಶಾಲೆ, ಚಿಟ್ಟಡೆ ಕಾಲನಿ, ರಾಮನಗರದವರೆಗೆ ವಿಸ್ತರಿಸಿದೆ. ಬೇಟೋಳಿ ೨ ವಾರ್ಡ್ ಹೊಂದಿದ್ದು ೬ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಅಮ್ಮಣಕುಟ್ಟಂಡ ಸುರೇನ್ ಕಟ್ಟಿ, ಪಟ್ರಪಂಡ ಸನ್ನು, ರಜಾಕ್, ಆಲೀಮಾ, ಶಾಂತಿ, ಲತಾ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ.
ಕುಟುಂಬಗಳು: ಬೊಳ್ಯಪಂಡ, ಅಮ್ಮಣಕುಟ್ಟಂಡ, ಕೀತಿಯಂಡ, ನಾಯಕಂಡ, ಪಟ್ಟಡ, ಕಾಂಚೇರಿರ, ಕಂಬಂಡ, ನುಚ್ಚಿಮಣಿಯಂಡ, ಮಾಚಿಮಂಡ, ಪೋರೆರ (ಕೊಡವ), ಬೊಪ್ಪಚಂಡ(ಬಣ್ಣ), ಕೊಂಕಣಿ, ಕ್ರಿಶ್ಚಿಯನ್, ಮುಸ್ಲಿಂ, ಕೊಡವ ಮಾಪಿಳ್ಳೆ, ಕೆಂಬಟ್ಟಿ, ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡದ ಜನರಿದ್ದಾರೆ.
ಬೊಟ್ಟ್‌ಬೊಳ್ಳಿ ಬೇಟೋಳಿ
ಈ ಗ್ರಾಮದಲ್ಲಿ ಬೆಳ್ಳಿಯ ಕೊಂಬು ಇರುವುದನ್ನು ಗಮನಿಸಿದ ರಾಜರು ಅದನ್ನು ಪರಿಶೀಲನೆ ನಡೆಸಲು ಆಸ್ಥಾನಕ್ಕೆ ತರಿಸಿದಾಗ ಆ ಕೊಂಬಿನಲ್ಲಿ ಬೆಳ್ಳಿಯ ಬೊಟ್ಟು ಇರುವುದನ್ನು ಗಮನಿಸಿ ಬೊಟ್ಟ್‌ಬೊಳ್ಳಿ ಊರು ಎಂದ ನಾಮಕರಣ ಮಾಡಿದರು. ದಿನ ಕಳೆದಂತೆ ಬೊಟ್ಟ್‌ಬೊಳ್ಳಿ ಹೋಗಿ ಬೇಟೋಳಿ ಆಗಿದೆ. ಬೊಳ್ಳಿಕೊಂಬು ಬೋಟೋಳಿ ಎಂದು ಕರೆಯಲಾಗುತ್ತಿದೆ.
ದೇವಾಲಯಗಳು
ಭದ್ರಕಾಳಿ, ಅಯ್ಯಪ್ಪ, ಮಾದೇವ, ಕಾಕೋಟಚ್ಚ, ಮಸೀದಿ, ಕೊಡವರ ಕೈಮಡಗಳು, ಊರ್ ಮಂದ್, ನಾಡ್ ಮಂದ್ ಇದೆ. ಭದ್ರಕಾಳಿ ದೇವರ ವಾರ್ಷಿಕ ಉತ್ಸವ ಮೇ೧೫ ರಂದು ದೇವರ ಕಟ್ಟು ಬಿದ್ದು, ಮೇ ೨೨ ರಂದು ಬೇಡು ಹಬ್ಬ ನಡೆಯಲಿದೆ. ಬೊಳ್ಯಪಂಡ ಕುಟುಂಬ ದೇವ ಹಾಗೂ ಊರು ತಕ್ಕರಾಗಿ, ಅಮ್ಮಣಕುಟ್ಟಂಡ ಕುಟುಂಬ ನಾಡ್‌ತಕ್ಕರಾಗಿ, ಪಟ್ಟಡ ಕುಟುಂಬ ಪಾಕೋಡು ಅಯ್ಯಪ್ಪ ದೇವರ ತಕ್ಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರಕಾಳಿ ದೇವರ ೨೭ ಎಕರೆ ದೇವರಕಾಡನ್ನು ಸಂರಕ್ಷಿಸಲಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಎರಡು ಸಾರ್ವಜನಿಕ ಗ್ರಂಥಾಲಯ, ಸಮುದಾಯ ಭವನ, ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ಕೃಷಿ ಪತ್ತಿನ ಸಹಕಾರ ಸಂಘ, ದವಸ ಭಂಡಾರ ಇದೆ.
ಸಾಧಕರು: ಪಟ್ಟಡ ರೀನಾ ಪ್ರಕಾಶ್, ಪಟ್ಟಡ ರಂಜಿ ಪೂಣಚ್ಚ, ಪಟ್ಟಡ ರಕ್ಷಿತ್, ನಾಯಕಂಡ ಬೋಪಣ್ಣ, ಅಮ್ಮಣಕುಟ್ಟಂಡ ಧರಣಿ ಕಟ್ಟಿ, ಪಟ್ಟಡ ಮನು, ಬೊಳ್ಯಪಂಡ ಬೋಜಮ್ಮ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಬೊಳ್ಯಪಂಡ ಕಾರ್ಯಪ್ಪ ಹಾಕಿ ಇಂಡಿಯಾದ ಕೋಚ್, ಪ್ರೊ. ಪಟ್ಟಡ ಪೂವಣ್ಣ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಕಾಲೇಜು ಪ್ರಾಂಶುಪಾಲರಾಗಿದ್ದಾರೆ.
ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ಪಟ್ಟಡ ಕರುಂಬಯ್ಯ, ಕರ್ನಲ್ ಪಟ್ಟಡ ತಿಮ್ಮಯ್ಯ, ಕರ್ನಲ್ ಸುಬ್ಬಯ್ಯ, ವಿಂಗ್ ಕಮಾಂಡರ್ ಪಿ.ಎಂ. ದೇವಯ್ಯ, ಅಮೇರಿಕಾದಲ್ಲಿ ವಿಜ್ಞಾನಿಯಾಗಿರುವ ಪಟ್ಟಡ ರಜತ್ ಪೂವಯ್ಯ, ಬೊಯಿಂಗ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ರುವ ಪಿ.ಎ. ಕಾಳಪ್ಪ, ಪ್ರಖ್ಯಾತ ವಿಜ್ಞಾನಿಗಳಾಗಿರುವ ಕವಿತಾ ಅಪ್ಪಚ್ಚು, ಪಿ.ಯು. ಮೇದಪ್ಪ ಈ ಗ್ರಾಮದವರಾಗಿದ್ದಾರೆ.
**
ಉದ್ಯೋಗ ಖಾತ್ರಿ ಯೋಜನೆಯಡಿ ಬಹುತೇಕ ರಸ್ತೆ ಮಾಡಲಾಗಿದೆ. ರಾಮನಗರ, ಗುಂಡಿಗೆರೆ ಭಾಗಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ, ನೀರಿನ ವ್ಯವಸ್ಥೆ ಮಾಡಲಾಗುವುದು. ಗ್ಯಾಸ್ ಗೋಡಾನ್ ಬಳಿ ನೀರಿ ಟ್ಯಾಂಕ್ ನಿರ್ಮಾಣ ಮಾಡಲು ರೂಪುರೇಷೆ ಸಿದ್ಧ ಪಡಿಸ ಲಾಗುತ್ತಿದೆ. ಪ್ರಧಾನ ಮಂತ್ರಿಗಳ ಜಲ ಜೀವನ್ ಮಿಷನ್ ಯೋಜನೆಯು ಚಾಲ್ತಿಯಲ್ಲಿದೆ. ಅಮ್ಮಣಕುಟ್ಟಂಡ ಸುರೇನ್ ಕಟ್ಟಿ, ಸದಸ್ಯರು, ಬೇಟೋಳಿ ಗ್ರಾಮ ಪಂಚಾಯಿತಿ.
**
ಭದ್ರಕಾಳಿ ದೇವಾಲಯಕ್ಕೆ ತೆರಳುವ ರಸ್ತೆ ಕಾಂಕ್ರಿಟಿಕರಣ ಮಾಡಬೇಕಾಗಿದೆ. ಭದ್ರಕಾಳಿ, ಈಶ್ವರ ದೇವರ ೨ ಕಡತಲೆಗಳು, ಭಂಡಾರ ನಮ್ಮ ಐನ್‌ಮನೆಯಲ್ಲಿ ಇರುವುದರಿಂದ ಅಶುದ್ಧ ಆಗದ ರೀತಿಯಲ್ಲಿ ನೋಡಿಕೊಳ್ಳಲು ಸರ್ಕಾರದಿಂದ ಒಂದು ಕೋಣೆ ನಿರ್ಮಿಸಿ ಕೊಟ್ಟರೆ ಉಪಕಾರವಾಗುತ್ತದೆ. ಬೊಳ್ಯಪಂಡ ಬಬ್ಬು ಉತ್ತಪ್ಪ, ದೇವತಕ್ಕರು, ಬೇಟೋಳಿ.
**
ಗ್ರಾಮ ಪಂಚಾಯಿತಿ ಸದಸ್ಯ ಸನ್ನು ಚಂಗಪ್ಪ ಬಿಡುಗಡೆಯಾದ ಅನುದಾನದಲ್ಲಿ ಉತ್ತಮ ಕೆಲಸ ನಿರ್ವಸುತ್ತಿದ್ದಾರೆ. ಹೆಚ್ಚಿನ ಕೆಲಸ ನಿರ್ವ ಹಿಸಲು ಅನುದಾನದ ಕೊರತೆ ಇದೆ. ಚಿಟ್ಟಡೆ ಶಾಲೆಯಿಂದ ಮುಖ್ಯ ರಸ್ತೆಯವರೆಗೆ ರಸ್ತೆ ನಿರ್ಮಾಣ ಆಗಬೇಕಿದೆ. ಸಮರ್ಪಕ ಚರಂಡಿ ಇಲ್ಲದರಿಂದ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಪಟ್ರಪಂಡ ಉಮೇಶ್, ಗ್ರಾಮಸ್ಥರು, ಬೇಟೋಳಿ.
**
ಬೂದಿಮಾಳ, ಹೆಗ್ಗಳ ಕಡೆಯಿಂದ ಹರಿದು ಬರುವ ನೀರು ಚಿಟ್ಟಡೆ ಮೂಲಕ ಹರಿದು ಹೋಗುತ್ತಿರುವುದರಿಂದ ಚಿಟ್ಟಡೆ ಗ್ರಾಮ ಸಂಪರ್ಕಿ ಸುವ ಸೇತುವೆ ಶಿಥಿಲಾವಸ್ಥೆಗೆ ಬಂದಿದೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತದೆ. ಹೊಳೆಯಲ್ಲಿ ಊಳು ತುಂಬಿದೆ. ಬಹುತೇಕ ಒತ್ತುವರಿಯಾದ ಕಾರಣ ಮಳೆಗಾಲದಲ್ಲಿ ನೀರು ಹರಿಯಲು ಜಾಗ ಇಲ್ಲದೆ ಕಾರಣ ರಸ್ತೆ ಬಂದ್ ಆಗುತ್ತದೆ. ಮಹಮ್ಮದ್ ಚಿಟ್ಟಡೆ, ಗ್ರಾಮಸ್ಥ.
**
ಗ್ರಾಮದಲ್ಲಿ ಉತ್ತಮ ಕಟ್ಟಡ ಹೊಂದಿರುವ ೩ ಶಾಲೆಗಳಿವೆ. ಸುಸಜ್ಜಿತ ಎರಡು ಗ್ರಂಥಾಲಯಗಳಿವೆ. ಉತ್ತಮ ಪುಸ್ತಕಗಳನ್ನು ಹೊಂದಿದ್ದರು ಕೂಡ ಸಾರ್ವಜನಕರ ಬಳಕೆ ಕಡಿಮೆಯಾಗಿದೆ. ಒದುವ ಹವ್ಯಾಸ ಬೆಳಸಿಕೊಂಡರೆ ಮಾತ್ರ ಹೆಚ್ಚಿನ ಜ್ಞಾನ ಹೊಂದಲು ಸಾಧ್ಯವಾಗುತ್ತದೆ. ಪ್ರೊ.ಪಟ್ಟಡ ಪೂವಣ್ಣ, ಪ್ರಾಂಶುಪಾಲಕರು, ಮೂರ್ನಾಡು ಪ್ರಥಮ ದರ್ಜೆ ಕಾಲೇಜು.