

ಹರಿಹರ: ಕಾಲು ಜಾರಿ ಬಿದ್ದು ಗುರುವಾರ ನದಿಯಲ್ಲಿ ಮುಳುಗಿದ್ದರೆನ್ನಲಾದ ಪ್ರಕರಣದಲ್ಲಿ ಇಬ್ಬರ ದೇಹಗಳು ಶುಕ್ರವಾರ ಪತ್ತೆಯಾಗಿವೆ.
ತಾಲೂಕಿನ ಮೂಗಿನಗೊಂದಿ ಗ್ರಾಮದ ಭಾಗ್ಯಜ್ಯೋತಿ (41) ಮತ್ತು ಪುತ್ರಿ ವೇದಿಕಾ (9) ಮೃತರು.
ಗುರುವಾರ ಮಧ್ಯಾಹ್ನ ನಗರದ ರಾಘವೇಂದ್ರಸ್ವಾಮಿ ಮಠದ ಹಿಂಭಾಗದ ನದಿ ದಡದಲ್ಲಿ ಈ ಇಬ್ಬರು ಮುಳುಗಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅಂದು ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದರು. ಆದರೆ, ತಾಯಿ, ಮಗಳು ಪತ್ತೆಯಾಗಿರಲಿಲ್ಲ.
ಶುಕ್ರವಾರ ಬೆಳಿಗ್ಗೆ ತಾಯಿ ಭಾಗ್ಯಜ್ಯೋತಿ ಅವರ ಮೃತದೇಹ ರಾಘವೇಂದ್ರ ಮಠದ ಹಿಂಭಾಗದಲ್ಲಿ ಸಿಕ್ಕಿತ್ತು. ಅಗ್ನಿಶಾಮಕ ದಳದ ತಂಡ ಯಾಂತ್ರೀಕೃತ ದೋಣಿಯ ಮೂಲಕ ನದಿಯಲ್ಲಿ ಶೋಧ ಕಾರ್ಯ ನಡೆಸಿದ ನಂತರ ಶನಿವಾರ ಮಧ್ಯಾಹ್ನ ರೈಲ್ವೆ ಸೇತುವೆ ಬಳಿ ಮಗಳು ವೇದಿಕಾ ಮೃತ ದೇಹ ಪತ್ತೆಯಾಗಿದೆ.
ಪತಿ ಆನಂದಪಾಟೀಲ್ ನೀಡಿರುವ ದೂರಿನಲ್ಲಿ, ತನ್ನ ಪತ್ನಿ ಭಾಗ್ಯಜ್ಯೋತಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲೆಂದು ಗ್ರಾಮದಿಂದ ಹರಿಹರದ ಆಸ್ಪತ್ರೆಗೆ ಆ. 3ರಂದು ಬೆಳಿಗ್ಗೆ ತೆರಳಿದ್ದರು. ಅಂದು ಮಧ್ಯಾಹ್ನ ನದಿ ದಡದಲ್ಲಿ ಕುಳಿತಾಗ ನದಿಗೆ ಜಾರಿ ಬಿದ್ದಿದ್ದಾರೆಂದು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದೆ.