ತಾಳ್ಮೆಯಿಂದ ಪ್ರತಿಕ್ರಿಯಿಸಿ: ಹೆಚ್‌ಡಿಕೆಗೆ ಸಲಹೆ

WhatsApp Image 2023-06-27 at 10.29.43 AM
Published on

ಮಡಿಕೇರಿ:

ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಸ್ವಲ್ಪ ತಾಳ್ಮೆ ಎನ್ನುವುದು ಇರಬೇಕು. ಆತುರದಲ್ಲಿ ಬುಲೆಟ್ ಹಾರಿಸುವುದು ಬೇಡ, ಅದರ ಬದಲು ಸರ್ಕಾರಕ್ಕೆ ಸಲಹೆ ಕೊಡಲಿ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಸಚಿವರಾದ ನಂತರ ಮಂಗಳವಾರ ಮೊದಲ ಬಾರಿಗೆ ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ, ಮಾತೆ ಕಾವೇರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೋಸರಾಜ್, ಈಗಾಗಲೇ ಅವರು ಜನರಿಂದ ತಿರಸ್ಕೃತರಾಗಿದ್ದಾರೆ. ಇದೇ ರೀತಿ ಆಡಿದ್ರೆ ಇನ್ನಷ್ಟೂ ತಿರಸ್ಕೃತರಾಗುತ್ತಾರೆ. ಹಾಗಾಗಿ ತಾಳ್ಮೆಯಿಂದ ಪ್ರತಿಕ್ರಿಯಿಸಿ ಎಂದು ಕುಮಾರ ಸ್ವಾಮಿ ಅವರಿಗೆ ಬೋಸರಾಜ್ ಸಲಹೆ ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಮಿಷನ್‌ಗಾಗಿ ಹಿಂದಿನ ಬಿಜೆಪಿ ಸರ್ಕಾರದ ಕಾಮಗಾರಿ ತಡೆಹಿಡಿದಿದೆ ಎಂಬ ಕಾರಜೋಳ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ ಬಿಜೆಪಿಗರು ತಮ್ಮೊಳಗೆ ಬಡಿದಾಡಿಕೊಳ್ಳುತ್ತಿದ್ದಾರೆ. ಅದನ್ನು ಮರೆಮಾಚಲು ಇಂತಹ ಆರೋಪ ಮಾಡಲಾಗುತ್ತಿದೆ. ಯಾವುದೇ ಸರ್ಕಾರ ಬಂದಾಗಲೂ ಕೆಲಸ ಮಾಡಲು ಸಮಯ ಅಂತ ಬೇಕಾಗುತ್ತದೆ. ಗೋವಿಂದ ಕಾರಜೋಳ ಮತ್ತು ಬಿಜೆಪಿಗರ ಕಾರ್ಯ ನೋಡಿ ಜನ ತಿರಸ್ಕಾರ ಮಾಡಿದ್ದಾರೆ ಎಂದರು.

ಗ್ಯಾರಂಟಿಗಳನ್ನು ಜಾರಿ ಮಾಡದಿದ್ದರೆ ಧರಣಿಗೆ ಕೂರುತ್ತೇವೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಡಿಯೂರಪ್ಪ ಮೂರ್ನಾಲ್ಕು ಬಾರಿ ಸಿಎಂ ಆಗಿದ್ದವರು. ಸಮಯ ಹಿಡಿಯೋದು ಅವರಿಗೆ ಗೊತ್ತಿಲ್ವಾ? ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ೭ ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಅದನ್ನು ಬಿಜೆಪಿ ೫ ಕೆಜಿಗೆ ಇಳಿಸಿದ್ದು ಯಾಕೆ? ಇದನ್ನು ಯಡಿಯೂರಪ್ಪ, ರಾಜ್ಯದ ಬಿಜೆಪಿ ಸಂಸದರು ಯಾಕೆ ಪ್ರಶ್ನೆ ಮಾಡುವುದಿಲ್ಲ?
ಅಕ್ಕಿಯನ್ನು ಮೋದಿ ಏನು ಅವರ ಮನೆಯಿಂದ ತಂದು ಕೊಡುತ್ತಾರಾ ಎಂದು ಬೋಸರಾಜ್ ಪ್ರಶ್ನೆ ಮಾಡಿದರು.

ಸದ್ಯದಲ್ಲೇ ಅಧಿವೇಶನ ಆರಂಭವಾಗುತ್ತದೆ. ಎಲ್ಲರೂ ಅನುಭವಿಗಳಿದ್ದೇವೆ, ಜನಪರ ಆಡಳಿತ ನಡೆಸಲಾಗುತ್ತದೆ. ಆಹಾರ ಭದ್ರತಾ ಕಾಯ್ದೆಯಲ್ಲಿ ಕೆಲವು ನಿಯಮಗಳಿವೆ ಆ ಪ್ರಕಾರವೇ ನಾವು ಆಹಾರ ವಿತರಿಸುತ್ತೇವೆ ಎಂದು ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net