ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ

bosaraju
Published on

ಮಡಿಕೇರಿ:

ಯಾವುದೇ ಕಾರಣಕ್ಕೂ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಐದು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಸ್ಪಷ್ಟಪಡಿಸಿದರು. ಶಕ್ತಿ ಯೋಜನೆ ಮರುಪರಿಶೀಲನೆ ಮಾಡುತ್ತೇವೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ 52 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ. ನಾವು ಕೊಟ್ಟಿರುವ ಮಾತಿನಂತೆ ಐದು ವರ್ಷ ಮುಂದುವರಿಯುತ್ತದೆ. ಕೆಲವು ಮಹಿಳೆಯರು ನಾವು ದುಡ್ಡುಕೊಟ್ಟು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಡಿಸಿಎಂ ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳಲ್ಲಿ ಯಾಕೆ ಬಂದಿದೆ ಎಂದು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ.

ಯಾವುದೇ ಕಾರಣಕ್ಕೂ ಗೊಂದಲ ಮೂಡಿಸಬಾರದು ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆ ವಿಸಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ವಕ್ಫ್ ಬೋರ್ಡ್ನಿಂದ ರಾಜ್ಯದ ರೈತರಿಗೆ ನೊಟೀಸ್ ಜಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಇವತ್ತು ಆಗಿರುವುದಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ರೈತರಿಗೆ ನೊಟೀಸ್ ನೀಡಲಾಗಿದೆ. ಇದಕ್ಕೆ ಸಾಕ್ಷ್ಯ ನನ್ನ ಹತ್ತಿರ ಇದೆ. ವಿಜಯಪುರದಲ್ಲಿ ಪ್ರಥಮವಾಗಿ ನೊಟೀಸ್ ನೀಡಿದ್ದು ಬಿಜೆಪಿ ಸರ್ಕಾರ. ಯಾದಗಿರಿಯಲ್ಲಿ ಅಂತಹ ಯಾವುದೇ ಪ್ರಸಂಗ ಬಂದಿರಲಿಲ್ಲ. ಕೆಲವು ಕಡೆ ನೊಟೀಸ್ ಬಂದಿರುವುದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಈ ವಿಷಯ ಚರ್ಚೆಯಾಗಿದೆ. ಹಾಗೆ ಆಗಿದ್ದರೆ ಅದನ್ನು ಸರಿಪಡಿಸಲು ಕಟ್ಟುನಿಟ್ಟಿನ ಆದೇಶವಾಗಿದೆ. ಅಧಿಕಾರಗಳ ಎಡವಟ್ಟಿನಿಂದ ಆಗಿದೆಯೋ ಅಥವಾ ಯಾವುದರಿಂದ ಆಗಿದೆ ಎನ್ನುವುದನ್ನು ತನಿಖೆ ಮಾಡುವುದಕ್ಕೂ ಸೂಚಿಸಲಾಗಿದೆ. 2-3 ಕಡೆ ಆಗಿರುವುದನ್ನು ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲಾ ಆಗಿರುವುದು ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಎಂದು ಹೇಳಿದರು.

ಬೆಳಗಾವಿಯಲ್ಲಿ ನಾಡ ದ್ರೋಹಿ ಎಂಇಎಸ್ ಕಾರ್ಯಕರ್ತರಿಗೆ ಪೊಲೀಸ್ ಭದ್ರತೆ ವಿಚಾರದಲ್ಲಿ ಮಾತನಾಡಿ, ಅದು ಎಂಇಎಸ್ ಗೆ ಭದ್ರತೆ ನೀಡಿರುವುದಲ್ಲ. ಬದಲಾಗಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಹಿಂದೆ ಬೆಳಗಾವಿ ಸೌಧದ ಮೇಲೆ ಬಾವುಟ ಹಾರಿಸಿದ್ದರು.

ಹಾಗೆ ಆಗಬಾರದೆಂದು ಪೊಲೀಸರು ಎಚ್ಚರ ವಹಿಸಿದ್ದಾರೆ. ಎಂದೂ ಅವರಿಗೆ ಅಲ್ಲಿ ಅವಕಾಶ ಕೊಡುವುದಿಲ್ಲ

ನಾಡಿನ ಗಡಿನಾಡು ಪ್ರದೇಶಗಳಿಗೆ ಯಾವುದೇ ಸಮಸ್ಯೆ ಬರದಂತೆ ಸಿಎಂ ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಜನರ ಭಾವನೆ ಕೆರಳಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ.

ಆದರೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net