ಕರ್ತವ್ಯ ಲೋಪವೆಸಗಿದ ಎರವಲು ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ

bbmp office
Published on

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯದ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಪಶ್ಚಿಮ ವಲಯದ ವಿವಿಧ ವಾಡ್‌ಗಳಲ್ಲಿ ಸಾರ್ವಜನಿಕರು ನೀಡುವ ದೂರುಗಳು ಹಾಗೂ ಕುಂದು-ಕೊರತೆ ವಿವರಗಳನ್ನು ‘ಸಹಾಯ 2.0 ತಂತ್ರಾಂಶ’ದಲ್ಲಿ ಅಪ್‌ಲೋಡ್ ಮಾಡುವಂತೆ ಹಿಂದೆಯೆ ಎಲ್ಲ ಸಿಬ್ಬಂದಿಗೂ ನಿರ್ದೇಶನ ನೀಡಲಾಗಿತ್ತು. ಆದರೆ, ಈ ಮೂವರು ಸಿಬ್ಬಂದಿ ಆದೇಶ ಪಾಲಿಸದೆ ದೂರುಗಳ ವಿಲೇವಾರಿಗೆ ನಿರ್ಲಕ್ಷ್ಯ ಮಾಡಿದ್ದರು. ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಶುಕ್ರವಾರ ಮಹಾಲಕ್ಷ್ಮೀಪುರ ವಿಭಾಗಕ್ಕೆ ಭೇಟಿ ನೀಡಿದ್ದ ವೇಳೆ, ಆ ಭಾಗದಲ್ಲಿ ರಸ್ತೆಗುಂಡಿ ಮುಚ್ಚುವುದು ಸೇರಿ ದೂರು ನೀಡಿದ್ದರೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ನಾಗರಿಕರು ಆಕ್ಷೇಪಿಸಿದರು. ಇದನ್ನು ಪರಿಗಣಿಸಿ ದೂರುಗಳನ್ನು ನಿಯಮಾನುಸಾರ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಿ ಸಂಬಂಧಿಸಿದ ವಿಭಾಗಕ್ಕೆ ರವಾನಿಸದ ಹಿನ್ನೆಲೆಯಲ್ಲಿ ಸಂತೋಷ್, ಬಿ.ಎಸ್.ಚಂದನಾ ಹಾಗೂ ಬಾಬು ಎಂಬುವವನ್ನು ಕರ್ತವ್ಯಲೋಪಕ್ಕಾಗಿ ಶಿಸ್ತುಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.

ಇದರನ್ವಯ ಜಲಸಂಪನ್ಮೂಲ ಇಲಾಖೆಯ ಸಹಾಯಕ ಅಭಿಯಂತರರಾದ ಸಂತೋಷ್ ಹಾಗೂ ಬಿ.ಎಸ್.ಚಂದನಾ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ. ಮತ್ತೊಬ್ಬ ಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಿಯ ಆರೋಗ್ಯ ಪರಿವೀಕ್ಷಕ ಬಾಬು ಅವರನ್ನು ಬೇಜವಾಬ್ದಾರಿ ತೋರಿದ್ದಕ್ಕಾಗಿ ಸೇವೆಯಿಂದ ಬಿಡುಗಡೆಗೊಳಿಸಿ ಪಶ್ಚಿಮ ವಲಯದ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net