

ಪಾಂಡವಪುರ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಪಾಂಡವಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಲಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ಕಚೇರಿಗಳು, ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು, ಚಿತ್ರಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್‌ಗಳು ಹಾಗೂ ಲಾರಿ, ಗೂಡ್ಸ್ ವಾಹನಗಳು ಎಂದಿನಂತೆ ಸಂಚರಿಸಿದವು. ಜನಜೀವನ ಸಹಜ ಸ್ಥಿತಿಯಲ್ಲಿತ್ತು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜಮಾವಣೆಗೊಂಡ ಜೆಸಿಟಿಯು, ರೈತಸಂಘ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.
ವಾಗ್ವಾದ: ಪಾಂಡವ ಕ್ರೀಡಾಂಗಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ತಡೆದ ಪೊಲೀಸರು ಮೆರವಣಿಗೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ತಲುಪಿ ಅಂತ್ಯಗೊಳಿಸುವುದಾಗಿ ತಿಳಿಸಿದರು.
ಇದಕ್ಕೆ ಅವಕಾಶ ನೀಡದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಹಳೇ ಬಸ್ ನಿಲ್ದಾಣದಲ್ಲೇ ಸಮಾವೇಶ ನಡೆಸಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಮುಷ್ಕರದಲ್ಲಿ ಜೆಸಿಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ರೈತಸಂಘ ವಲಯಾಧ್ಯಕ್ಷ ಎ.ಎಲ್.ಕೆಂಪೂಗೌಡ, ಹರವು ಪ್ರಕಾಶ್, ವಿಷ್ಣು ಸೇನಾ ಸಂಘಟನೆಯ ವಿಷ್ಣು ವಿಠಲ, ಕನ್ನಡ ಸೇನೆಯ ದೇವು, ರುಕ್ಮಿಣಿ, ದಸಂಸ ಮುಖಂಡ ಅಂಕಯ್ಯ ಇತರರಿದ್ದರು.