

ತುಮಕೂರು: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ‘ದಿಶಾ’ ಸಮಿತಿ ಸಭೆ ಕೇವಲ 2 ಗಂಟೆ ಕಾಲ ನೀರಸವಾಗಿಯೇ ನಡೆದು ಮುಕ್ತಾಯವಾಯಿತು.
ಮಧ್ಯಾಹ್ನ 2ಕ್ಕೆ ನಿಗದಿಯಾಗಿದ್ದ ಸಭೆ 4ಕ್ಕೆ ಆರಂಭವಾಯಿತು, ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಇದ್ದರು.
ಶಾಸಕರ ಗೈರು ಹಾಜರಿ ಈ ಸಭೆಯಲ್ಲಿಯೂ ಮುಂದುವರಿಯಿತು. ಕೃಷಿ, ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕೇಂದ್ರ ಸರ್ಕಾರದಿಂದ ಈ ಆರ್ಥಿಕ ವರ್ಷದಲ್ಲಿ ನಯಾಪೈಸೆ ಬಂದಿಲ್ಲ. ಹಾಗಾಗಿ, ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿಯೇ ಹೇಳಿದರು.
ಗ್ರಾಮೀಣ ಭಾಗದ ಸ್ತ್ರೀಶಕ್ತಿ ಗುಂಪುಗಳು ಕ್ರಿಯಾಶೀಲವಾಗಿದ್ದು, ಎಲ್ಲರಿಗೂ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮನರೇಗಾ ಯೋಜನೆಯಲ್ಲಿ ಸ್ತ್ರೀಶಕ್ತಿ ಭವನ ನಿರ್ಮಿಸಿಕೊಡಿ ಎಂದು ಜಿಪಂ ಅಧಿಕಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.
ಸರ್ಕಾರದ ನಿರೀಕ್ಷೆಗಳನ್ನು ಸಾಕಾರ ಮಾಡಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಆದರೆ, ಅಧಿಕಾರಿಗಳು ಕಾರ್ಯರೂಪಕ್ಕೆ ತರಲು ಏನು ಸಮಸ್ಯೆ ಎಂದು ತೋಟಗಾರಿಕಾ ಇಲಾಖೆ ಡಿಡಿ ರಘುಗೆ ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು. ಗಂಗಾಕಲ್ಯಾಣ ಯೋಜನೆ ಪಡೆದಿರುವ ಫಲಾನುಭವಿಗಳಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತಿತರರ ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಬೇಕು, ಪ್ರೋತ್ಸಾಹ ನೀಡಬೇಕು ಎಂದರು.
ಸರ್ಕಾರಿ ಐಟಿಐಗೆ 6 ಎಕರೆ ಜಮೀನು: ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ, ವಿಜ್ಞಾನ ಕೇಂದ್ರಕ್ಕೆ ಈ ಹಿಂದೆ ನೀಡಿದ್ದ 6 ಎಕರೆ ಜಮೀನನ್ನು ಐಟಿಐ ಕಾಲೇಜಿಗೆ ನೀಡಬೇಕು ಎಂದು ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮನವಿ ಮಾಡಿದರು. ಮುಂದಿನ ಸಭೆಯೊಳಗೆ ಈ ಬಗ್ಗೆ ಕ್ರಮವಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಭೆಯಲ್ಲಿ ಭರವಸೆ ನೀಡಿದರು.
ಮಾಧುಸ್ವಾಮಿ ಇಲಾಖೆ ಮೇಲೆ ಸಂಸದರ ಗರಂ: ಜಲಶಕ್ತಿ ಮಿಷನ್ ಯೋಜನೆಯಲ್ಲಿ ಕೇಂದ್ರದಿಂದ ಹಣಕಾಸು ನೆರವು ಪಡೆಯಲು ಸಾಧ್ಯವಿದ್ದು, ಜಿಲ್ಲೆಯಲ್ಲಿರುವ ಕೆರೆಗಳ ಮಾಹಿತಿ ನೀಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು, ಸದಸ್ಯ ಕುಂದರನಹಳ್ಳಿ ರಮೇಶ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಲಾಖೆ ಇಇ ರವಿ ಸೂರನ್ ಜಿಲ್ಲೆಯಲ್ಲಿ 375 ಕೆರೆಗಳಿವೆ ಎಂದು ನೀಡಿದ ಮಾಹಿತಿಗೆ ಸಿಟ್ಟಾದ ರಮೇಶ್, ದಿಶಾ ಸಭೆಯಲ್ಲಿ ನಡಾವಳಿ ಮಾಡಿದ್ದರೂ ಜಿಲ್ಲೆಯಲ್ಲಿರುವ ಜಲಮೂಲದ ಮಾಹಿತಿ ನೀಡುತ್ತಿಲ್ಲ ಎಂದು ಹರಿಹಾಯ್ದರು. ಜಿಲ್ಲೆಯಲ್ಲಿ 4345 ಜಲಮೂಲಗಳಿರುವುದು ಗೂಗಲ್ ಸರ್ವೇಯಲ್ಲಿ ಕಾಣಿಸಿದ್ದರೆ ಇಲಾಖೆ ಅಧಿಕಾರಿಗಳು ಓಬಿರಾಯನ ಕಾಲದ ಅಂಕಿ, ಅಂಶ ಒಪ್ಪಿಸುತ್ತಿದ್ದಾರೆ. ಇವರ ನಿರ್ಲಕ್ಷೃದ ಬಗ್ಗೆ ಕೇಂದ್ರಕ್ಕೆ ಪತ್ರಬರೆಯಬೇಕು ಎಂದು ಮನವಿ ಮಾಡಿದರು. ಸಚಿವ ಎ.ನಾರಾಯಣಸ್ವಾಮಿ ತಿಪ್ಪೆಸಾರಿಸಿ, ಚರ್ಚೆಗೆ ಮಂಗಳ ಹಾಡಿದರು.
ನಾವು ಮೂರು ಅಥವಾ ಆರು ತಿಂಗಳಿಗೂ ಸಭೆ ನಡೆಸಿದರೂ ಜನರಿಗೆ ಅನುಕೂಲ ಮಾಡಲು ಸಾಧ್ಯವಿರುವ ನೂರಾರು ಕಾರ್ಯಕ್ರಮಗಳ ಬಗ್ಗೆ ಯೋಚನೆ ಬರುತ್ತವೆ, ಪ್ರತಿದಿನ ಅದೇ ಕೆಲಸ ಮಾಡುವ ಅಧಿಕಾರಿಗಳೇಕೆ ರೈತರಿಗೆ ಹೊಸ ಯೋಜನೆಗಳ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ.
- ಜಿ.ಎಸ್.ಬಸವರಾಜು ಸಂಸದ