

ಮಸ್ಕಿ: ಸುಗ್ಗಿ ಕಾಲದಲ್ಲಿ ಚಳಿ ಹೆಚ್ಚಾಗಿದ್ದು ಜನತೆ ಗಡಗಡ ನಡುಗುತ್ತಿದ್ದಾರೆ. ಶೀತ ಗಾಳಿಯಿಂದ ನಸುಕಿನಲ್ಲಿ ಜನ ಹಾಸಿಗೆ ಬಿಟ್ಟು ಏಳದಂತಾಗಿದೆ. ಪ್ರತಿದಿನ ಸಂಜೆ 6ಕ್ಕೆ ಆರಂಭವಾಗುವ ಚಳಿ ಬೆಳಗ್ಗೆ 8-9 ಗಂಟೆ ಆದರೂ ಮುಂದುವರೆದಿರುತ್ತದೆ.
ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದ್ದು ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ತಣ್ಣಗಿನ ವಾತಾವರಣದಿಂದ ರಕ್ಷಿಸಿಕೊಳ್ಳಲು ಮನೆ ಬಳಿ, ರಸ್ತೆಗಳಲ್ಲಿ ಕಟ್ಟಿಗೆಗಳನ್ನು ಜೋಡಿಸಿ ಬೆಂಕಿ ಹಚ್ಚಿ ಮೈ ಬೆಚ್ಚಗೆ ಮಾಡಿಕೊಳ್ಳುತ್ತಿರುವುದು, ಸಂಜೆಯಾಗುತ್ತಲೆ ಮನೆ ಸೇರಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಅಲ್ಲದೆ ಮೂಲೆ ಸೇರಿದ್ದ ಸ್ವೇಟರ್, ಟೋಪಿ, ಮಫ್ಲರ್, ಕೋಟು ಮತ್ತಿತರ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ನವೀನ ಮಾದರಿಯ ಮತ್ತಷ್ಟು ಬೆಚ್ಚನೆಯ ಉಡುಪುಗಳು ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿವೆ. ಮೈ ಕೊರೆಯುವ ಥಂಡಿಗೆ ಈ ಬಾರಿ ಮಕ್ಕಳು, ವೃದ್ಧರು, ಮಹಿಳೆಯರು ಥರಗುಟ್ಟುತ್ತಿದ್ದಾರೆ. 42 ಡಿಗ್ರಿ ಬಿಸಿಲಿದ್ದರೂ ಹೆದರದೆ ಕೆಲಸ ಮಾಡುವ ಈ ಭಾಗದ ಜನ 17 ಡಿಗ್ರಿ ಸೆಲ್ಸಿಯಸ್ ವಾತಾವರಣಕ್ಕೆ ಒಗ್ಗಿಕೊಳ್ಳಲು ಆಗದೆ ಚಳಿಗಾಲ ಯಾವಾಗ ಮುಗಿಯುತ್ತದೆಯೋ ಎಂದು ಗೊಣಗಾಡುತ್ತಿದ್ದಾರೆ.