ನೀರಿದ್ದರೂ ಮುರ್ಲಾಪುರ ಗ್ರಾಮಸ್ಥರಿಗೆ ತೀರದ ದಾಹ

WATER PROBLEM
ಮಹಿಳೆಯರು ಕೆರೆ ನೀರನ್ನು ತರುತ್ತಿರುವುದು. ಮುರ್ಲಾಪುರ ಗ್ರಾಮಸ್ಥರು ನೀರನ್ನು ತಳ್ಳುಗಾಡಿ ಮೂಲಕ ತರುತ್ತಿರುವುದು.
Published on

ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಒಂದೆಡೆ ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ಕೆಟ್ಟು ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ನಿಲೋಗಿಪುರ ಸಮೀಪ ತುಂಗಭದ್ರಾ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ನನೆಗುದಿಗೆ ಬಿದ್ದಿದೆ. ಇದರ ಪರಿಣಾಮವನ್ನು ಮುರ್ಲಾಪುರ ಗ್ರಾಮಸ್ಥರು ಅನುಭವಿಸುವಂತಾಗಿದೆ.

ಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹಾಗೂ ಕೊಪ್ಪಳ ಜಿಲ್ಲೆಯ ಗಡಿ ಗ್ರಾಮವಾದ ಮುರ್ಲಾಪುರಕ್ಕೆ ಇಷ್ಟು ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಆದರೆ, ಯೋಜನೆಯ ಅಸಮರ್ಪಕ ನಿರ್ವಹಣೆಯಿಂದ ಕೆಲ ತಾಂತ್ರಿಕ ಸಮಸ್ಯೆಗಳಾಗಿದ್ದು, ಕಳೆದ ಎಂಟು ದಿನಗಳಿಂದ ಯೋಜನೆ ನೀರು ಗ್ರಾಮಕ್ಕೆ ಹರಿದಿಲ್ಲ.

ಇನ್ನು ಗ್ರಾಮದಲ್ಲಿದ್ದು ಬೋರ್‌ವೆಲ್ ಕೂಡ ಕೆಟ್ಟಿದ್ದು, ಒಂದು ವಾರ ಕಳೆಯುತ್ತ ಬಂದರೂ ಸ್ಥಳೀಯಾಡಳಿತ ಅದರ ದುರಸ್ತಿಗೆ ತಲೆಕೆಡಿಕೊಂಡಿಲ್ಲ. ಹೀಗಾಗಿ ಇಡೀ ಗ್ರಾಮದ ಹನಿ ನೀರಿಗಾಗಿ ಕೆರೆ-ಕುಂಟೆಗಳನ್ನು ಅವಲಂಬಿಸಬೇಕಾಗಿದೆ.

ಸುಮಾರು 800 ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆಸರೆಯಾಗಿತ್ತು. ಆದರೆ, ಈ ನೀರು ಅನಿಯಮಿತವಾಗಿ ಪೂರೈಕೆಯಾಗುತ್ತಿದೆ. ಈ ಯೋಜನೆಯಡಿ ನೀರು ಪೂರೈಕೆಯಾದರೂ, ಅದು ಗ್ಯಾರಂಟಿ ಇಲ್ಲ. ಅಸಮರ್ಪಕ ಪೂರೈಕೆಯಿಂದ ಜನ ರೋಸಿಹೋಗಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಿಂದ ಪರ್ಯಾಯ ವ್ಯವಸ್ಥೆಯಾಗಿ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಸದ್ಯ ಈ ಬೋರ್‌ವೆಲ್ ಕೂಡ ಕೆಟ್ಟುಹೋಗಿದ್ದು, ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಬಳಕೆ ನೀರಿಗಾಗಿ ಕೆರೆ, ಕೃಷಿ ಹೊಂಡಗಳನ್ನು ಆಶ್ರಯಿಸಿದ್ದಾರೆ. ಕುಟುಂಬದ ಒಬ್ಬ ಸದಸ್ಯ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ನಿಲ್ಲುವಂತಾಗಿದೆ.

ಮಹಿಳೆಯರು, ಮಕ್ಕಳು ಸಹ ನೀರಿಗಾಗಿ ಕೆರೆಯತ್ತ ಮುಖ ಮಾಡಿದ್ದಾರೆ. ಕುಡಿಯುವ ನೀರಿನ ಘಟಕ ಸಹ ದುರಸ್ತಿಯಲ್ಲಿದೆ. ಇದರಿಂದ ಕುಡಿಯುವ ನೀರಿಗಾಗಿ ಕೆಲವರು ಕೆರೆ ನೀರನ್ನು ಬಳಸಿದರೆ, ಇನ್ನು ಕೆಲವರು ಪಕ್ಕದ ಹಳ್ಳಿಗೆ ಹೋಗಿ ಶುದ್ಧ ಕುಡಿಯುವ ನೀರಿನ್ನು ತರುತ್ತಿದ್ದಾರೆ. ಗ್ರಾಮದಲ್ಲಿ ನೀರು ಪೂರೈಸಲು ಗ್ರಾಪಂನಿಂದ ನೀರುಗಂಟಿಯನ್ನೂ ನೇಮಿಸಿಲ್ಲ. ಹೀಗಾಗಿ ಬೋರ್‌ವೆಲ್ ನೀರನ್ನು ಗ್ರಾಮಸ್ಥರೇ ಪೂರೈಸಿಕೊಳ್ಳುತ್ತಿದ್ದಾರೆ.

ಗ್ರಾಮಕ್ಕೆ ನೀರು ಪೂರೈಸುವ ಬೋರ್‌ವೆಲ್ ಕೆಟ್ಟಿರುವುದರಿಂದ ಸಮರ್ಪಕ ನೀರು ಪೂರೈಕೆಗೆ ಅಡ್ಡಿಯಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯ ತಾಂತ್ರಿಕ ಸಮಸ್ಯೆಯಿಂದ ನೀರು ಹರಿಸಲು ಸಾಧ್ಯವಾಗಿಲ್ಲ. ಶೀಘ್ರ ಬೋರ್‌ವೆಲ್ ದುರಸ್ತಿ ಮಾಡಿ ತುರ್ತಾಗಿ ನೀರು ಪೂರೈಸಲಾಗುವುದು.ರತ್ನವ್ವ ಕಂಬಳಿ, ಪಿಡಿಒ, ಹಟ್ಟಿ ಗ್ರಾಪಂ

ಗ್ರಾಮದಲ್ಲಿ ನೀರು ಬಾರದೇ ಇರುವುದರಿಂದ ಜನ ನೀರಿಗಾಗಿ ಕೆರೆ, ಕೃಷಿ ಹೊಂಡದ ನೀರನ್ನು ಬಳಸುವಂತಾಗಿದೆ. ಮನೆಯ ಒಬ್ಬ ಸದಸ್ಯ ನೀರು ತರುವ ಕೆಲಸಕ್ಕೆಂದೇ ದಿನಪೂರ್ತಿ ಸಮಯ ವ್ಯರ್ಥ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಗ್ರಾಪಂ ಆಡಳಿತ ತುರ್ತಾಗಿ ಸಮಸ್ಯೆ ಬಗೆಹರಿಸಲಿ.ಮಲ್ಲಿಕಾರ್ಜುನ ಹಾರೋಗೇರಿ, ಗ್ರಾಮಸ್ಥ, ಮುರ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net