ಮಾಹಿತಿ ನೀಡದ ಮುಖ್ಯಾಧ್ಯಾಪಕರ ವಿರುದ್ಧ ಬೇಸರ

18 mnd 2
Published on

ಮುಂಡಗೋಡ: ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಯಲ್ಲಿ ಹಿನ್ನಡೆ ಸಾಧಿಸಿರುವುದು ಹಾಗೂ ಮುಖ್ಯಾಧ್ಯಾಪಕರ ಬಳಿ ಸರಿಯಾದ ಮಾಹಿತಿ ಇಲ್ಲದಿರುವುದನ್ನು ಕಂಡು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೇಸರ ವ್ಯಕ್ತಪಡಿಸಿದ ಘಟನೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಬುಧವಾರ ಜರುಗಿತು.

ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಲೆಗೆ ದೀಢಿರ್ ಭೇಟಿ ನೀಡಿದ ಜಿಲ್ಲಾಧಿಕಾರಿ, ಶಾಲೆಯಲ್ಲಿ ಎಷ್ಟು ಮಕ್ಕಳು ಓದುತ್ತಿದ್ದಾರೆ ಹಾಗೂ ಇತ್ತೀಚೆಗೆ ನಡೆದ ಪರೀಕ್ಷೆಗಳ ಮಾಹಿತಿ, ಎಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಷ್ಟು ಜನ ಫೇಲಾಗಿದ್ದಾರೆ ಎಂದು ಮಾಹಿತಿ ಕೇಳಿದಾಗ ಮುಖ್ಯೋಪಾಧ್ಯಾಯ ಪರಶುರಾಮ ಅವರು ಸರಿಯಾದ ಉತ್ತರ ನೀಡಲಿಲ್ಲ. ಇದರಿಂದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬೇಸರ ವ್ಯಕ್ತಪಡಿಸಿದರು.

ನಂತರ ಯಾವ ಯಾವ ವಿಷಯಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕೇಳಿದರು. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ವಿದ್ಯಾರ್ಥಿಗಳು ಫೇಲಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದರು. ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿಗಳನ್ನು ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿ, ಬಳಿಕ ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಪರಿಶೀಲನೆ: ಬಿಸಿಯೂಟ ತಯಾರಿಕಾ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿ, ಸಾಂಬಾರು ತಯಾರಿಸುವ ಬೇಳೆಯಲ್ಲಿ ಹುಳು ಇರುವುದನ್ನು ಕಂಡು ಅಡುಗೆ ತಯಾರಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಎರಡು ದಿನಕ್ಕೊಮ್ಮೆ ಈ ಶಾಲೆಗೆ ಭೇಟಿ ನೀಡುವಂತೆ ತಹಸೀಲ್ದಾರ್ ಶಂಕರ ಗೌಡಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಆಸ್ಪತ್ರೆಯಲ್ಲಿ ಪರಿಶೀಲನೆ

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿ ಲಕ್ಷ್ಮಿಪ್ರೀಯಾ, ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಪಿಜಿಷಿಯನ್, ಮಕ್ಕಳ ತಜ್ಞ ಸೇರಿದಂತೆ ಇತರೆ ವೈದ್ಯರ ಕೊರತೆಯ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪಾರಾಣಿ ಪಾಟೀಲ ಮಾಹಿತಿ ನೀಡಿದರು.
ನಂತರ ಹಳೂರದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಅಂಗನವಾಡಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ತಹಸೀಲ್ದಾರ್ ಶಂಕರ ಗೌಡಿ, ತಾಪಂ ಅಧಿಕಾರಿ ಟಿ.ವೈ. ದಾಸನಕೊಪ್ಪ, ಸಿಡಿಪಿಒ ರಾಮು ಬೈಲ್‌ಸೀಮೆ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ., ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಪ್ರದೀಪ ಭಟ್, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net