ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವಷ್ಟು ಬೇಸರ: ಹೊರಟ್ಟಿ ಅಸಮಾಧಾನ

Basavaraja horatti
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
Published on

ಶಿವಮೊಗ್ಗ: ವಿಧಾನ ಪರಿಷತ್ ಅಧಿವೇಶನಗಳು ಅರ್ಥ ಕಳೆದುಕೊಳ್ಳುತ್ತಿದ್ದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವಷ್ಟು ಬೇಸರ ತರಿಸುತ್ತಿದೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಸೊರಬದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆಯುತ್ತಿದ್ದ ಅಧಿವೇಶನಗಳು ಅರ್ಥಗರ್ಭಿತವಾಗಿರುತ್ತಿದ್ದವು. ಸದನದಲ್ಲಿ ಪಾಲ್ಗೊಂಡು ಚರ್ಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಆಗುತ್ತಿತ್ತು. ಹಿಂದಿನ ಯಾವುದೇ ಅಧಿವೇಶನಗಳಲ್ಲಿ ಸಭಾಪತಿ ಸ್ಥಾನಕ್ಕೆ ಗೌರವ ಇರುತಿತ್ತು. ಆದರೆ ಈಗ ಸಭಾಪತಿಗೆ ಗೌರವವೇ ಇಲ್ಲ ಎಂದರು.
ಶಾಸನ ಸಭೆಗಳು ವಿಷಯಾಧಾರಿತವಾಗಿ ನಡೆಯುತ್ತಿಲ್ಲ. ಅವರು ಇವರನ್ನು ಬೈಯುವುದು, ಇವರು ಇವರನ್ನು ತೆಗಳುವುದೇ ಆಗುತ್ತಿದೆ. ಬರಬರುತ್ತಾ ಸದನದೊಳಗೆ ಚರ್ಚೆಗಳು ಕಳಪೆ ಆಗುತ್ತಿವೆ. ನಾನು ಕೂಡ ಇದನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಆದರೆ ಆ ಎಲ್ಲ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಈ ಬಗ್ಗೆ ನನಗೂ ಬೇಸರ ಇದೆ. ರಾಜೀನಾಮೆ ಕೊಟ್ಟು ಹೋಗುವುದೇ ಒಳ್ಳೆಯದೆಂದು ಒಂದು ಬಾರಿ ಹೇಳಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಮುಖವಾಗಿ ಹೊಸ ಶಾಸಕರಿಗೆ ಸದನದೊಳಗೆ ನಡೆದುಕೊಳ್ಳುವ ರೀತಿ ನೀತಿಗಳ ಬಗ್ಗೆ ಕಾರ್ಯಾಗಾರಗಳ ಅವಶ್ಯಕತೆ ಇದೆ. ಈಗಾಗಲೇ ಕಾರ್ಯಾಗಾರ ನಡೆಸಿದರೂ ಅವರಲ್ಲಿ ಬದಲಾವಣೆ ಕಾಣಿಸುತ್ತಿಲ್ಲ. ವ್ಯವಸ್ಥೆ ಹಾಳಾಗಿ ಹೋಗಿದೆ. ವಿಧಾನ ಪರಿಷತ್‌ನಲ್ಲಿ ಖಾದ್ರಿ ಶಾಮಣ್ಣ, ಮಲ್ಲಿಕಾರ್ಜುನ ಮನ್ಸೂರು ಅಂತಹ ದೊಡ್ಡ ದೊಡ್ಡ ನಾಯಕರು ಇರುತ್ತಿದ್ದರು. ಚುನಾವಣೆಯಲ್ಲಿ ಸೋತ ಸಂಸದರು, ಶಾಸಕರು, ದೊಡ್ಡ ದೊಡ್ಡ ರಾಜಕಾರಣಿಗಳ ಜತೆ ಅಡ್ಡಾಡುವವರು ಪರಿಷತ್‌ಗೆ ಬರುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದವರು ಸುಧಾರಣೆ ಆಗುವ ಲಕ್ಷಣ ಕಂಡಿಲ್ಲ. ಆದರೂ ಅವರನ್ನು ಸರಿದಾರಿಗೆ ತರುವ ಬಗ್ಗೆ ಮತ್ತೆ ಮತ್ತೆ ಪ್ರಯತ್ನ ಮಾಡುತ್ತೇವೆ. ಬೆಳಗಾವಿ ಅಧಿವೇಶನ ವಿಸ್ತರಣೆ ಮಾಡಬೇಕೆಂದು ಬಹಳ ಮಂದಿ ಶಾಸಕರು ಕೇಳಿದರು. ಆದರೆ ಅಧಿವೇಶನ ವಿಸ್ತರಣೆ ಮಾಡಲು ಸಾಧ್ಯವಾಗಿಲ್ಲವೆಂದು ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net