ಕೊಪ್ಪ ತಾಲೂಕು ಕಚೇರಿ ಶೌಚಗೃಹದಲ್ಲಿ ನೀರೇ ಇಲ್ಲ

web 1
Published on

ಕೊಪ್ಪ: ಬಾಳಗಡಿಯಲ್ಲಿರುವ ತಾಲೂಕು ಕಚೇರಿ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹಕ್ಕೆ ನಾಲ್ಕು ವರ್ಷದಿಂದ ನಾಮಫಲಕವೂ ಇಲ್ಲ. ಶೌಚವನ್ನು ಶುಚಿಗೊಳಿಸಲು ನೀರಿನ ವ್ಯವಸ್ಥೆಯೂ ಇಲ್ಲ. ಇದರಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.

ತಾಲೂಕು ಕಚೇರಿಗೆ ಪ್ರತಿದಿನ ದೂರದ ಊರುಗಳಿಂದ ನೂರಾರು ಜನ ತಮ್ಮ ಕೆಲಸಕ್ಕೆ ಬರುತ್ತಾರೆ. ಅವರಿಗೆ ಕಚೇರಿ ಆವರಣದಲ್ಲಿರುವ ಶೌಚಗೃಹ ಉಪಯೋಗಕ್ಕೆ ಲಭ್ಯವಿಲ್ಲದೆ ಬಹಿರ್ದೆಸೆಗೆ ತೆರಳಲು ಸಮಸ್ಯೆಯಾಗಿದೆ.

ನಾಲ್ಕು ವರ್ಷದ ಹಿಂದೆ ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಲಾಯಿತು. ಆದರೆ ಕಚೇರಿಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಸಾರ್ವಜನಿಕ ಶೌಚಗೃಹ ದುರವಸ್ಥೆಗೆ ತಲುಪಿದೆ. ಕಚೇರಿ ಹರಂದೂರು ಗ್ರಾಪಂ ವ್ಯಾಪ್ತಿಯಲ್ಲಿದೆ. ಇಲ್ಲಿ ಒಂದು ಬೋರ್​ವೆಲ್ ಇದೆ. ಇದರ ನೀರನ್ನು ಕಚೇರಿಗೆ ಮಾತ್ರ ಬಳಸಲಾಗುತ್ತಿದೆಯೇ ಹೊರತು ಸಾರ್ವಜನಿಕ ಶೌಚಗೃಹಕ್ಕೂ ಸಂಪರ್ಕ ಕಲ್ಪಿಸಬೇಕು ಎಂಬ ವಿವೇಚನೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇದ್ದಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net