

ಈಶ್ವರಮಂಗಲ: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿಯಲ್ಲಿ ಕರ್ನಾಟಕ ಕೇರಳ ಗಡಿಪ್ರದೇಶದಲ್ಲಿ ಹಾದು ಹೋಗುವ ಪಂಚೋಡಿ-ಕರ್ನೂರು-ಗಾಳಿಮುಖ ಅಂತಾರಾಜ್ಯ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಇದು ಈ ಭಾಗದ ಪ್ರಮುಖ ಅಂತಾರಾಜ್ಯ ಸಂಪರ್ಕ ರಸ್ತೆಯೂ ಆಗಿದೆ. ಡಾಂಬರು ಎದ್ದುಹೋಗಿದ್ದು, ಜಲ್ಲಿ ಕಲ್ಲುಗಳು ರಸ್ತೆ ಬದಿಗೆ ಸರಿದು ರಾಶಿ ಬಿದ್ದಿವೆ. ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡ- ಗುಂಡಿಗಳಾಗಿದೆ. ಕೆಲವಡೆ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಮಳೆಗಾಲದಲ್ಲಿ ರಾತ್ರಿ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಮಾಣಿ- ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿಂದ ಈಶ್ವರಮಂಗಲ- ಕರ್ನೂರು ಮೂಲಕವಾಗಿ ಅತಿ ಕಡಿಮೆ ಅಂತರದಲ್ಲಿ ಜಾಲ್ಸೂರು- ಕಾಸರಗೋಡು ರಸ್ತೆಗೆ ಗಾಳಿಮುಖದಲ್ಲಿ ಸಂಪರ್ಕ ಕಲ್ಪಿಸುವ ಉಪಯುಕ್ತ ರಸ್ತೆ ಇದು. ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ- ಕೇರಳ ಗಡಿಭಾಗದ ಗಾಳಿಮುಖದಲ್ಲಿ ಬಂದ್ ಮಾಡಲಾಗಿದೆ. ಆದರೂ ಗಡಿಪ್ರದೇಶದ ಹೆಚ್ಚಿನ ಜನತೆ ಮತ್ತು ಕರ್ನೂರು ಭಾಗದ ಜನತೆ ನಿತ್ಯ ಅವಲಂಬಿಸಿಕೊಂಡಿದ್ದಾರೆ. ಆದರೆ ಪ್ರಸ್ತುತ ಈ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿರುವುದರಿಂದ ಈ ಗಡಿಭಾಗದ ಜನತೆ ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ. ಗಡಿಪ್ರದೇಶದ ಜನತೆಗೆ ಅನಿವಾರ್ಯವಾದ ಈ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಅಭಿವೃದ್ಧಿಗೊಳಿಸಲು ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು ಎಂಬುವುದು ಕರ್ನೂರು, ಗಾಳಿಮುಖ ಭಾಗದ ಜನತೆಯ ಬೇಡಿಕೆ.
ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಇಲ್ಲಿನ ಜನತೆಯ ‘ಸಂಚಾರ’ ಕಷ್ಟವನ್ನು ಅರಿತುಕೊಂಡು ಸಂಬಂಧಪಟ್ಟವರು ಸ್ಪಂದಿಸಬೇಕು. ಕೇವಲ ಭರವಸೆ ಕೊಡುವ ಬದಲು ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕು. ಶಿಹಾಬ್ ನೆಯ್ಯಡ್ಕ, ಸಾಮಾಜಿಕ ಕಾರ್ಯಕರ್ತ ಹದಗೆಟ್ಟಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ-ಗಾಳಿಮುಖ ರಸ್ತೆ ಅಭಿವೃದ್ಧಿಗೆ ಕೆಆರ್‌ಡಿಎಲ್‌ನಿಂದ ರೂ.40 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಅನಿತಾ ಹೇಮನಾಥ ಶೆಟ್ಟಿ, ಜಿಪಂ ಸದಸ್ಯರು ನೆಟ್ಟಣಿಗೆ ಮುಡ್ನೂರು ಕ್ಷೇತ್ರ.