

ಆರ್.ತುಳಸಿಕುಮಾರ್
ಬೆಂಗಳೂರು: ಬಿಬಿಎಂಪಿ ವಿಭಜಿಸಿ ಗ್ರೇಟರ್ ಬೆಂಗಳೂರು ಹೆಸರಿನಡಿ ಸಣ್ಣ ಪಾಲಿಕೆಗಳನ್ನಾಗಿಸಿ ರಚಿಸುವ ವೇಳೆ ಅವುಗಳ ಗಡಿ ಗುರುತಿಸಿ ಅಂತಿಮಗೊಳಿಸುವುದೇ ಸವಾಲಿನ ಕೆಲಸವಾಗಲಿದೆ. ಈ ಬೃಹತ್ ಹಾಗೂ ಕ್ಲಿಷ್ಟ ಕಾರ್ಯವನ್ನು ಸ್ವತಂತ್ರ ಆಯೋಗಕ್ಕೆ ವಹಿಸುವ ಸಂಬಂಧ ರಾಜ್ಯ ಸರ್ಕಾರ ಸೂಕ್ತವಾದವರ ಆಯ್ಕೆಗೆ ಶೀಘ್ರವೇ ಚಾಲನೆ ನೀಡಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ವಿಧಾನಮಂಡಲದ ಎರಡೂ ಸದನ ಒಪ್ಪಿಗೆ ನೀಡಿದ್ದು, ಅದರ ಅಂಗೀಕಾರಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುತ್ತದೆ. ಆನಂತರ ಅಧಿಕೃತ ರಾಜ್ಯಪತ್ರ ಹೊರಬೀಳಲಿದೆ. ಇದರ ಬೆನ್ನಲ್ಲೇ ಹೊಸ ಪಾಲಿಕೆ ಹಾಗೂ ಅವುಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ಗಳ ರಚನೆಗೆ ಆಯೋಗವನ್ನು ರಚಿಸಲಾಗುತ್ತದೆ. ಹಾಲಿ ಬಿಬಿಎಂಪಿಯ ವ್ಯಾಪ್ತಿಯನ್ನು ಕೇಂದ್ರವಾಗಿರಿಸಿ ಹೊಸ ಪಾಲಿಕೆಗಳನ್ನು ರೂಪಿಸಲು ಅಲ್ಲಿನ ಜನಸಂಖ್ಯೆ, ಜನಸಾಂದ್ರತೆ, ಉತ್ಪತ್ತಿಯಾಗಲಿರುವ ಆದಾಯ, ಸಂಪನ್ಮೂಲ ಸಂಗ್ರಹದ ಹಿನ್ನೆಲೆ, ಮೂಲಸೌಕರ್ಯವನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.
ಗಡಿ ಗುರುತಿಸುವ ವೇಳೆ ಈ ಅಂಶಗಳ ಜತೆಗೆ ಇನ್ನಿತರ ಅಂಶಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಮುಖ್ಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳನ್ನು ಹೊಸ ಪಾಲಿಕೆಗಳಲ್ಲಿ ಇಡಿಯಾಗಿ ಸೇರ್ಪಡೆ ಮಾಡಬೇಕಾಗುತ್ತದೆ. ಇದು ಅತಿ ಕ್ಲಿಷ್ಟದ ಕಾರ್ಯವಾಗಿದೆ. ಅಸೆಂಬ್ಲಿ ಕ್ಷೇತ್ರಗಳ ಪೂರ್ಣ ಪ್ರದೇಶವನ್ನು ಒಂದೇ ಪಾಲಿಕೆಯಡಿ ತರುವಂತೆ ಶಾಸಕರು ಈಗಾಗಲೇ ವಿಧೇಯಕದ ಚರ್ಚೆ ವೇಳೆ ಪ್ರತಿಪಾದಿಸಿದ್ದಾರೆ. ಇದಕ್ಕೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಆದರೆ, 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ವೇಳೆ ಬಿಬಿಎಂಪಿಗೆ ಸೇರ್ಪಡೆ ಆಗಿರುವ ಹೊಸ ಪ್ರದೇಶಗಳು ದೊಡ್ಡ ಮತಕ್ಷೇತ್ರವಾಗಿವೆ. ಯಲಹಂಕ, ಬ್ಯಾಟರಾಯನಪುರ, ಕೆ.ಆರ್.ಪುರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ, ಯಶವಂತಪುರ ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಆಯಾ ಪಾಲಿಕೆಗಳಿಗೆ ಸೇರಿಸಲು ಗಡಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಹೊಸ ಪಾಲಿಕೆ ಮೂರೋ, ಐದೋ . . .:
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಗರಿಷ್ಠ ಏಳು ಪಾಲಿಕೆಗಳನ್ನಾಗಿ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಆಡಳಿತಕ್ಕೆ ಸುಲಭವಾಗಲು 3 ಅಥವಾ 5 ಪಾಲಿಕೆಗಳನ್ನಾಗಿ ರೂಪಿಸುವ ಸಾಧ್ಯತೆ ಇದೆ. ಮೂರು ಪಾಲಿಕೆ ಮಾಡಿದರೆ ಬೆಂಗಳೂರು ಪೂರ್ವ, ಪಶ್ಚಿಮ ಹಾಗೂ ಸೆಂಟ್ರಲ್ ಎಂದು ಹೆಸರಿಸಬಹುದು. ಐದು ಪಾಲಿಕೆ ಮಾಡಿದ್ದಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಸೆಂಟ್ರಲ್ ಪಾಲಿಕೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಜತೆಗೆ 3 ಅಥವಾ 5 ಪಾಲಿಕೆಗಳಲ್ಲಿ ಕ್ರಮವಾಗಿ ತಲಾ 150 ಅಥವಾ 100ರ ಆಸುಪಾಸಿನಲ್ಲಿ ವಾರ್ಡ್‌ಗಳನ್ನು ರಚನೆಯಾಗಲಿವೆ. ಇದರ ಅಂತಿಮ ನಿರ್ಧಾರವನ್ನು ಆಯೋಗದ ವಿವೇಚನೆಗೆ ಬಿಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ.
ಇದರ ಹೊರತಾಗಿಯೂ ಬೆಂಗಳೂರು ಪೂರ್ವ ಪಾಲಿಕೆ ರಚಿಸಿದರೆ ಹಾಲಿ ಕೆ.ಆರ್.ಪುರ, ಮಹದೇವಪುರ ಪ್ರದೇಶವು ಆದಾಯ ಕ್ರೋಡೀಕರಣದಲ್ಲಿ ಸಂಪತ್ಭರಿತವಾಗಿದೆ. ಈ ಎರಡೂ ಅಸೆಂಬ್ಲಿ ಕ್ಷೇತ್ರವನ್ನು ಒಂದೇ ಪಾಲಿಕೆಗೆ ಸೇರಿಸಿದರೆ ಇನ್ನುಳಿದ ಪಾಲಿಕೆಗಳ ವ್ಯಾಪ್ತಿಗೆ ಹೆಚ್ಚಿನ ಮತಕ್ಷೇತ್ರಗಳನ್ನು ಸೇರಿಸುವುದು ಸವಾಲು ಎದುರಾಗಲಿದೆ. ಸದ್ಯದ ಮಟ್ಟಿಗೆ ಹಾಲಿ ಬಿಬಿಎಂಪಿಯ ವ್ಯಾಪ್ತಿಯ ಹೊರಗಿನ ಪ್ರದೇಶವನ್ನು ಸೇರ್ಪಡೆ ಮಾಡಿಕೊಡದಿರಲು ನಿರ್ಧರಿಸಲಾಗಿದೆ. ಆದರೂ, ಭವಿಷ್ಯದಲ್ಲಿ ಹೊಸ ಪ್ರದೇಶ ಸೇರ್ಪಡೆಗೆ ವಿಧೇಯಕದಲ್ಲಿ ಅವಕಾಶ ಕಲ್ಪಿಸಿಕೊಂಡಿರುವುದರಿಂದ ಗಡಿ ವ್ಯಾಪ್ತಿ ನಿಖರತೆ ಅಸ್ಪಷ್ಟವಾಗಿದೆ.
ವಾರ್ಡ್ ಗಡಿ ಗುರುತೂ ಕ್ಲಿಷ್ಟಕರ?:
ಹೊಸ ಪಾಲಿಕೆಗಳಲ್ಲಿ ಗರಿಷ್ಠ 150ರ ಆಸುಪಾಸಿನಲ್ಲಿ ವಾರ್ಡ್‌ಗಳ ರಚನೆಗೆ ಅವಕಾಶ ಮಾಡಿಕೊಡಲಾಗಿದೆ. ಇವು ಹಾಲಿ ವಾರ್ಡ್‌ಗಳಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವಂತೆ ರಚಿಸಬಹುದು. ಆದರೆ, ನಗರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಅಲ್ಲಿನ ಪ್ರದೇಶಗಳನ್ನು ಕಿರಿದುಗೊಳಿಸಿ ವಾರ್ಡ್‌ಗಳಿಗೆ ಜನಸಂಖ್ಯೆ ನಿಗದಿಗೊಳಿಸಬೇಕಾಗುತ್ತದೆ. ಅಲ್ಲೆಲ್ಲ ಬೃಹತ್ ಅಪಾರ್ಟ್‌ಮೆಂಟ್‌ಗಳಿರುವ ಕಾರಣ ಕಡಿಮೆ ವಿಸ್ತೀರ್ಣದ ವಾರ್ಡ್ ರಚನೆಯಾಗಬಹುದು. ಆದರೆ, ನಗರದ ಮಧ್ಯ ಭಾಗದಲ್ಲಿ ರಚನೆಯಾಗಬಹುದಾದ ಸೆಂಟ್ರಲ್ ಪಾಲಿಕೆಯಲ್ಲಿ ಈ ಮಾದರಿ ತಿರುವು ಮುರುವು ಆಗಬಹುದು ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನಗರದ ಬೃಹತ್ ಅಸೆಂಬ್ಲಿ ಕ್ಷೇತ್ರಗಳು:
ಬೆಂಗಳೂರು ದಕ್ಷಿಣ, ಮಹದೇವಪುರ, ಯಶವಂತಪುರ, ಕೆ.ಆರ್.ಪುರ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ ಹಾಗೂ ಯಲಹಂಕ.
ನಗರದ ಸಣ್ಣ ಅಸೆಂಬ್ಲಿ ಕ್ಷೇತ್ರಗಳು:
ಶಿವಾಜಿನಗರ, ಗಾಂಧಿನಗರ, ಮಲ್ಲೇಶ್ವರ, ರಾಜಾಜಿನಗರ, ಜಯನಗರ, ಚಿಕ್ಕಪೇಟೆ, ಚಾಮರಾಜಪೇಟೆ, ಬಸವನಗುಡಿ.