ನಿಪ್ಪಾಣಿ ಗಡಿಯಲ್ಲಿ ಕರಾವಳಿಗರ ಪರದಾಟ, ಗಡಿಯತ್ತ ಬಂದು ವಾಪಸ್ ತೆರಳುವ ಸಂಕಟ

bus
Published on

ಉಡುಪಿ: ರಾಜ್ಯ ಸರ್ಕಾರ ಮೇ 31ರವರೆಗೆ ಅನ್ಯ ರಾಜ್ಯದವರ ಪ್ರವೇಶ ನಿರಾಕರಿಸಿ ಆದೇಶ ಹೊರಡಿಸಿದ್ದು, ಇದರ ಅರಿವಿಲ್ಲದ ಹೊರ ರಾಜ್ಯದಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಿಲ್ಲೆಗಳಿಗೆ ಧಾವಿಸಿ ಬರುವ ಪ್ರಯತ್ನ ಮಾಡುತ್ತಿದ್ದಾರೆ.

ಮುಂಬೈ, ಥಾಣೆ ಮೊದಲಾದ ಭಾಗದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. 7226 ಮಂದಿ ಈಗಾಗಲೇ ಜಿಲ್ಲೆಗೆ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದಾರೆ. ಇನ್ನೂ 10 ಸಾವಿರಕ್ಕೂ ಅಧಿಕ ಮಂದಿ ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾವೆಲ್ ಏಜೆನ್ಸಿಗಳ ಹಣದಾಹ: ಕರೊನಾ ಸಂಕಷ್ಟದ ಸಮಯದಲ್ಲಿಯೂ ಕೆಲವು ಟ್ರಾವೆಲ್ ಏಜೆನ್ಸಿಯವರು ಹಣದಾಸೆಗೆ ಜನರನ್ನು ಲೂಟಿ ಮಾಡುತ್ತಿದ್ದಾರೆ. ಮುಂಬೈನಲ್ಲಿರುವ ಕರಾವಳಿಗರಿಗೆ ಸೇವಾಸಿಂಧು ಪಾಸ್ ಇಲ್ಲದಿದ್ದರೂ ಊರಿಗೆ ಬಿಡುತ್ತೇವೆ, ಗಡಿ ದಾಟಿಸುವ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿ ದುಪ್ಪಟ್ಟು ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆದು ಏಜೆನ್ಸಿಯವರು ಕರೆ ತರುತ್ತಿದ್ದಾರೆ. ಆದರೆ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿರುವ ಕೊಗನೊಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಚೆಕ್‌ಪೋಸ್ಟ್‌ನಲ್ಲಿ ರಾಜ್ಯ ಸರ್ಕಾರ ಅನುಮತಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಯಾರನ್ನೂ ಒಳಗೆ ಬಿಡುತ್ತಿಲ್ಲ. ಇತ್ತ ಗಡಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಟ್ರಾವೆಲ್ ಏಜೆನ್ಸಿ ವಾಹನ, ಬಸ್ಸುಗಳು ಹಿಂದಕ್ಕೆ ತಿರುಗುತ್ತಿವೆ. ಮಹಾರಾಷ್ಟ್ರ ಸರ್ಕಾರ ಹೋಗುವರಿಗೆಲ್ಲಾ ತನ್ನ ರಾಜ್ಯದ ಪಾಸ್ ನೀಡಿ ಕಳಿಸುತ್ತಿದೆ. ಸರ್ಕಾರಿ ಬಸ್ಸುಗಳು ಜನರನ್ನು ಗಡಿವರೆಗೆ ತಂದು ಬಿಟ್ಟು ಹೋಗುತ್ತಿವೆೆ.

ದಿನವಿಡೀ ಕಾದ 247 ಮಂದಿ ವಾಪಸ್: ಎರಡು ದಿನ ಹಿಂದೆ 11 ಬಸ್ಸು, ವಾಹನಗಳಲ್ಲಿ ಬಂದಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬರುವ 247 ಜನರನ್ನು ನಿಪ್ಪಾಣಿ ಗಡಿವರೆಗೆ ಕರೆತಂದು ಬಿಡಲಾಗಿದೆ. ಇವರೆಲ್ಲಾ ಚೆಕ್‌ಪೋಸ್ಟ್‌ನಲ್ಲಿ ಎಷ್ಟು ಒತ್ತಾಯಿಸಿ, ಮನವಿ ಮಾಡಿದರೂ ಅಧಿಕಾರಿಗಳು ಬಿಡಲಿಲ್ಲ. ಬೆಳಗ್ಗೆ 3 ಗಂಟೆಗೆ ಬಂದವರು ಸಾಯಂಕಾಲ 6 ಗಂಟೆವರೆಗೂ ಕಾದು ಮತ್ತೆ ಮುಂಬೈಗೆ ವಾಪಸ್ ಹೋಗಿದ್ದಾರೆ. ಈ ರೀತಿ ಬಾಡಿಗೆ ವಾಹನ, ಸರ್ಕಾರಿ ಬಸ್ಸುಗಳಲ್ಲಿ ದಿನಕ್ಕೆ 10-15 ವಾಹನಗಳಲ್ಲಿ ಬಂದು ಗಡಿಯಲ್ಲಿ ಮಾತಿನ ಚಕಾಮಕಿ ನಡೆಸಿ ಆಕ್ರೋಶ, ಬೇಸರದೊಂದಿಗೆ ವಾಪಸ್ ಹೋಗುತ್ತಿದ್ದಾರೆ. ಮಕ್ಕಳು, ಗರ್ಭಿಣಿಯರು, ವೃದ್ಧರು ಇದರಲ್ಲಿದ್ದು ಸಾಕಷ್ಟು, ಕಷ್ಟ ನೋವು ಅನುಭವಿಸುತ್ತಾರೆ. ಮಹಾರಾಷ್ಟ್ರ ಪೊಲೀಸರು, ಗಡಿಯಲ್ಲಿ ದಿನವಿಡೀ ಕಾಯುತ್ತಿರುವ ಕೆಲವರಿಗೆ ಊಟ, ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನುತ್ತಾರೆ ಕೊಗನೊಳ ಗ್ರಾಮಸ್ಥರು.

ಜಿಲ್ಲೆಗೆ ಬರುವ ಜನರನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಮಹಾರಾಷ್ಟ್ರದಲ್ಲಿ ಟ್ರಾವೆಲ್ ಏಜೆನ್ಸಿಗಳು ದುಡ್ಡಿನಾಸೆಗೆ ಗಡಿವರೆಗೆ ತಂದು ಬಿಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿರುವ ಜಿಲ್ಲೆಯ ನಿವಾಸಿಗಳು ರಾಜ್ಯ ಸರ್ಕಾರದ ಆದೇಶ ಪಾಲಿಸಬೇಕು. ಮುಂದಿನ ಹಂತದಲ್ಲಿ ಜಿಲ್ಲೆಗೆ ಬರುವ ಅವಕಾಶವಿದೆ. ಸರ್ಕಾರದ ಆದೇಶದಂತೆ ಮೇ 31ರವರೆಗೆ ಪ್ರವೇಶ ಇಲ್ಲ. ಇದನ್ನು ಕಡ್ಡಾಯ ಪಾಲಿಸಲಾಗುತಿದ್ದು, ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳು ಭರ್ತಿಯಾಗಿವೆ. ಸದ್ಯಕ್ಕೆ ಯಾರನ್ನು ಜಿಲ್ಲೆಗೆ ಬಿಟ್ಟುಕೊಳ್ಳುವುದಿಲ್ಲ.

-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

ಸರ್ಕಾರದ ಆದೇಶದಂತೆ ಸದ್ಯಕ್ಕೆ ಗಡಿಯಲ್ಲಿ ಹೊರ ರಾಜ್ಯದಿಂದ ಬರುವವರನ್ನು ಯಾರನ್ನೂ ಒಳಗೆ ಬಿಡುತ್ತಿಲ್ಲ. ಮಹಾರಾಷ್ಟ್ರದಿಂದ ಬಂದವರನ್ನು ವಾಪಸ್ ಕಳುಹಿಸುತ್ತಿದ್ದೇವೆ. ಸದ್ಯಕ್ಕೆ ಮಹಾರಾಷ್ಟ್ರದಿಂದ ಬರುವ ವಾಹನಗಳ ಸಂಖ್ಯೆ ಕಡಿಮೆಯಾಗಿವೆ.

-ರವೀಂದ್ರ ಕರಲಿಂಗನವರ, ಉಪ ವಿಭಾಗಧಿಕಾರಿ ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net