ಮಹಾಜನ್ ಆಯೋಗದ ವರದಿಯೇ ಅಂತಿಮ, ಮಾಜಿ ಸಿಎಂ ಸಿದ್ದರಾಮಯ್ಯ

siddaramayya
Published on

ಶಿವಮೊಗ್ಗ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿದ್ದು ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದವರು ಸುಮ್ಮನೇ ಪದೇಪದೆ ಕಾಲು ಕೆರೆದುಕೊಂಡು ಕ್ಯಾತೆ ತೆಗೆಯುತ್ತಿದ್ದಾರೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೆಹೆರ್‌ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ರಚಿಸಿದ್ದ ಆಯೋಗ ಈಗಾಗಲೇ ವರದಿ ನೀಡಿದೆ. ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೂ ಮತ್ತೆ ಮತ್ತೆ ಪುಂಡಾಟಿಕೆ ಶುರು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಂಡಾಟಿಕೆಗಳಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ಕೊಡಬೇಕು. ಮಹಾರಾಷ್ಟ್ರದಲ್ಲೂ ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದು ಅಲ್ಲಿನ ಮುಖ್ಯಮಂತ್ರಿ ಪುಂಡಾಟಿಕೆಗಳಿಗೆ ಅವಕಾಶ ನೀಡಬಾರದು. ಇದೀಗ ಮಹಾರಾಷ್ಟ್ರದಲ್ಲಿರುವ ಬಹಳಷ್ಟು ಜನರು ಕರ್ನಾಟಕಕ್ಕೆ ಸೇರಲು ತಯಾರಾಗಿದ್ದಾರೆ. ಸೊಲ್ಹಾಪುರ, ಜತ್ ಸೇರಿದಂತೆ ಹಲವೆಡೆ ಕನ್ನಡಿಗರು ಕರ್ನಾಟಕಕ್ಕೆ ಬರಲು ಸಜ್ಜಾಗಿದ್ದಾರೆ. ಕನ್ನಡಿಗರು ವಾಸವಾಗಿರುವ ಪ್ರದೇಶಗಳಲ್ಲಿ ಅಲ್ಲಿನ ಸರ್ಕಾರ ಕನಿಷ್ಠ ಮೂಲಸೌಕರ್ಯಗಳನ್ನೂ ಕಲ್ಪಿಸುತ್ತಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net