ಗಡಿಭಾಗಕ್ಕೆ ಡಿಸಿ, ಎಸ್‌ಪಿ ಭೇಟಿ

DC Belgaum
Published on

ನಿಪ್ಪಾಣಿ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮತ್ತು ತಾಲೂಕಿನ ಕೊಗನೋಳಿ ಗ್ರಾಮದಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಬರುತ್ತಿದ್ದವರ ಕುರಿತು ಅಧಿಕೃತವಾಗಿ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಮಾಡಿದವರಿಗೆ ಮಾತ್ರ ರಾಜ್ಯದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ. ನೋಂದಣಿ ಮಾಡದೆ ಗಡಿಭಾಗದಲ್ಲಿ ಬಂದಿರುವ ಜನರ ಹೆಸರನ್ನು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು. ಬಳಿಕ ಇಲ್ಲಿನ ಪ್ರವಾಸಿ ಮಂದಿರಕ್ಕೆ ಬಂದ ಅವರು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ, ಸಾಂಗಲಿ, ಸಿಂಧುದುರ್ಗ ಮತ್ತು ಗೋವಾ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪಾಸ್ ಇಲ್ಲದೆ ಯಾರನ್ನೂ ರಾಜ್ಯದಲ್ಲಿ ಪ್ರವೇಶಿಸಲು ಬಿಡಬೇಡಿ ಎಂದು ತಿಳಿಸಲಾಗಿದೆ. ಹೊರ ರಾಜ್ಯದಿಂದ ಬಂದವರನ್ನು ತಪಾಸಣೆಗೊಳಪಡಿಸಿ 14 ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದರು. ಹೆಚ್ಚುವರಿ ಎಸ್.ಪಿ. ಅಮರನಾಥ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ, ಡಿವೈಎಸ್‌ಪಿ ಮನೋಜಕುಮಾರ ನಾಯಿಕ, ಸಿಪಿಐ ಸಂತೋಷ ಸತ್ಯನಾಯಿಕ, ಪಿಎಸ್‌ಐ ಕುಮಾರ ಹಾಡಕರ, ಬಿ.ಎಸ್. ತಳವಾರ, ಬಿ.ಜಿ. ಸುಬ್ಬಾಪುರಮಠ, ತಹಸೀಲ್ದಾರ್ ಪ್ರಕಾಶ ಗಾಯಕವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net