ಅಪ್ರಾಪ್ತರು ವಾಹನ ಚಲಾಯಿಸಿದರೆ ಪಾಲಕರ ಮೇಲೆ ಕೇಸ್

boo
Published on

ಬೆಳಗಾವಿ: ನಗರದಲ್ಲಿ ರಸ್ತೆ ಅಪಘಾತ, ಸಂಚಾರ ನಿಯಮ ಉಲ್ಲಂಘನೆ ತಡೆಗಟ್ಟುವ ಉದ್ದೇಶದಿಂದ 18 ವರ್ಷದ ಒಳಗಿನವರು ಬೈಕ್, ಕಾರು ಚಾಲನೆ ಮಾಡಿದರೆ ಪಾಲಕರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬೋರಸೆ ಭೂಷಣ್ ಗುಲಾಬರಾವ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಪ್ರಾಪ್ತರಿಗೆ ವಾಹನ ಓಡಿಸಲು ಅವಕಾಶ ಕಲ್ಪಿಸಿಕೊಡಬೇಡಿ ಎಂದು ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಕೆಲವೆಡೆ ಅಪ್ರಾಪ್ತರು ಬೈಕ್ ಬಳಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದರು.

ಈಗಾಗಲೇ ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಅಲ್ಲಲ್ಲಿ ಖಾಸಗಿ ಮಾಲೀಕತ್ವದ ಖಾಲಿ ನಿವೇಶನ ಬಾಡಿಗೆ ಪಡೆದು ಪೇ ಪಾರ್ಕಿಂಗ್ ಸೇವೆ ಆರಂಭಿಸಲು ಚರ್ಚಿಸಲಾಗುತ್ತಿದೆ. ನಗರದ ಕೆಲ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಸಿಬ್ಬಂದಿಗೆ ಮಾತ್ರ ಕಾಲೇಜಿನಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ರಸ್ತೆ ಬದಿಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದು, ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. ಆಯಾ ಕಾಲೇಜು ಪ್ರಾಚಾರ್ಯರಿಗೆ ನೋಟಿಸ್ ನೀಡಲಾಗಿದೆ ಎಂದರು.

ನಗರದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ವಾಹನ ಶಬ್ದ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬೈಕ್‌ಗಳಿಗೆ ಸೈಲೆನ್ಸರ್‌ನ್ನು ಬದಲಾವಣೆ ಮಾಡದಂತೆ ಗ್ಯಾರೇಜ್ ಮಾಲೀಕರೊಂದಿಗೆ ಸಭೆ ನಡೆಸಿ ಸೂಚಿಸಲಾಗಿದೆ. ಸೈಲೆನ್ಸರ್ ತೆಗೆದು ಬೈಕ್ ಓಡಿಸುತ್ತಿರುವವರ ವಿರುದ್ಧ ಕೇಸ್ ದಾಖಲಿಸಿ ಬೈಕ್ ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net