

ಹುಳಿಯಾರು : ಕೆಆರ್‌ಎಸ್ ಜಲಾಶಯಕ್ಕಿಂತಲೂ ಮೊದಲೇ ನಿರ್ಮಾಣಗೊಂಡ 125 ವರ್ಷಗಳ ಇತಿಹಾಸವುಳ್ಳ ಹುಳಿಯಾರು ಹೋಬಳಿಯ ಬೋರನಕಣಿವೆ ಜಲಾಶಯದ ಒಳ ಗೋಡೆಗಳು ಶಿಥಿಲವಾಗಿವೆ. ಜಲಾಶಯಕ್ಕೆ ಹೇಮಾವತಿ ಹಾಗೂ ಭದ್ರಾ ನದಿ ನೀರು ಹರಿಯುವ ಮುನ್ನ ದುರಸ್ತಿಯ ಅಗತ್ಯವಿದೆ.
1892ರಲ್ಲಿ ಮೈಸೂರು ಮಹಾರಾಜರು ಕಲ್ಲು, ಮಣ್ಣಿನ ಇಟ್ಟಿಗೆ ಮತ್ತು ಗಾರೆಯಿಂದ ಜಲಾಶಯ ಕಟ್ಟಿಸಿದ್ದು, ಒಳ ಗೋಡೆಯ ಗಾರೆ ಸಂಪೂರ್ಣ ಹಾಳಾಗಿದೆ. ಅಲ್ಲದೆ ಗೋಡೆಯ ಇಟ್ಟಿಗೆಯೂ ನೀರಿನಲ್ಲಿ ಕರಗುತ್ತಿದ್ದು ಮೊದಲ ಲೇಯರ್‌ನ ಬಹುತೇಕ ಇಟ್ಟಿಗೆಗಳು ಕರಗಿವೆ. ಹೀಗೆ ನಿರ್ಲಕ್ಷ್ಯಿಸಿದರೆ ಇಡೀ ಜಲಾಶಯವೇ ಶಿಥಿಲವಾಗುವ ಆತಂಕ ಎದುರಾಗಿದೆ. ಜಲಾಶಯದ ಕ್ರೆಸ್ಟ್ ಗೇಟ್ ಸಹ ಹಾಳಾಗಿದ್ದು, ಇತ್ತೀಚೆಗಷ್ಟೆ ಹೊಸ ಗೇಟ್ ಅಳವಡಿಸಿದ್ದಾರೆ. ಜಲಾಶಯದ ಗೋಡೆಗಳಲ್ಲಿ ವಿವಿಧ ಜಾತಿಯ ಗಿಡಗಳು ಬೆಳೆದು ಬೇರು ಬಿಟ್ಟಿದ್ದವು. ಇದರಿಂದ ಜಲಾಶಯ ಬಿರುಕು ಬಿಡುವ ಮುನ್ಸೂಚನೆ ಅರಿತ ಅಧಿಕಾರಿಗಳು ತೆರವು ಮಾಡಿದ್ದರು. ಆದರೆ ಈಗ ಮತ್ತೆ ಗಿಡ-ಗಂಟಿಗಳು ಬೆಳೆದಿದ್ದು, ಮೊದಲಿಗಿಂತ ಹೆಚ್ಚಾಗಿವೆ. ಹಾಗಾಗಿ ಮತ್ತೊಮ್ಮೆ ಗಿಡ-ಗಂಟಿಗಳ ತೆರವಿಗೆ ಮುಂದಾಗಬೇಕಿದೆ.
ಎರಡ್ಮೂರು ವರ್ಷಗಳಿಂದ ಜಲಾಶಯ ಪ್ರದೇಶದಲ್ಲಿ ಉತ್ತಮ ಮಳೆಯಾಗದ ಪರಿಣಾಮಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಕೆಳಮಟ್ಟದಲ್ಲಿ ನೀರಿದೆ. ಹಾಗಾಗಿ ಶಿಥಿಲಗೊಂಡಿರುವ ಗೋಡೆಗಳನ್ನು ಸುಲಭವಾಗಿ ದುರಸ್ತಿ ಮಾಡಬಹುದಾಗಿದೆ.
ಜಲಾಶಯದಿಂದ ಹುಳಿಯಾರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಾಣಧಾಳು, ಹೊಯ್ಸಳಕಟ್ಟೆ, ಕೆಂಕೆರೆ ಗ್ರಾಪಂ ವ್ಯಾಪ್ತಿಗೆ ನೀರು ಕೊಡುವ ಚಿಂತನೆ ಸರ್ಕಾರದ್ದಾಗಿದೆ. ಪರಿಣಾಮ ಪ್ರತಿ ವರ್ಷ ಕುಡಿಯಲು ನೀರು ಕೊಡುವ ಸಲುವಾಗಿ ನದಿಗಳಿಂದ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.
ಜಲಾಶಯಗಳ ದುರಸ್ತಿಗೆ ತಜ್ಞರನ್ನು ಒಳಗೊಂಡ ಪ್ರತ್ಯೇಕ ವಿಭಾಗವಿದ್ದು, ಅವರಿಗೆ ಪತ್ರ ಬರೆದಿರುವುದಾಗಿ ಇಲಾಖೆ ತಿಳಿಸುತ್ತದೆ. ಆದರೆ ಪತ್ರ ಬರೆದು ವರ್ಷಗಳೇ ಕಳೆದಿದ್ದು ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಪುನಃ ಗಮನ ಸೆಳೆಯುವ ಪ್ರಯತ್ನ ಮಾಡಿ ಶಿಥಿಲವಾಗಿರುವ ಜಲಾಶಯದ ಒಳಭಾಗದ ಗೋಡೆಗಳ ದುರಸ್ತಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಜಲಾಶಯದ ಇತಿಹಾಸವೇನು?: ಮೈಸೂರು ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು ಸುವರ್ಣಮುಖಿ ನದಿಗೆ ಅಡ್ಡಲಾಗಿ 1892ರಲ್ಲಿ ಅಣೆಕಟ್ಟೆ ಕಟ್ಟಿಸಿದ್ದಾರೆ. ಬೋರ ಎಂಬ ಕುರಿಗಾಹಿಯ ಮನವಿ ಮೇರೆಗೆ ಕಟ್ಟಿಸಿದ್ದರಿಂದ ಇದಕ್ಕೆ ಬೋರನಕಣಿವೆ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಅಲ್ಲದೆ ಜಲಾಶಯದ ಬಳಿ ಭೈರವೇಶ್ವರ ದೇಗುಲವಿದ್ದು ಭೈರವಕಣಿವೆ ಎಂಬ ಹೆಸರು ಕ್ರಮೇಣ ಬೋರನಕಣಿವೆ ಎಂದಾಗಿದೆ ಎನ್ನುತ್ತಾರೆ. 2002 ಎಕರೆ 31 ಗುಂಟೆ ಅಚ್ಚಕಟ್ಟು ಪ್ರದೇಶ ಒಳಗೊಂಡಿರುವ ಈ ಅಣೆಕಟ್ಟೆಯ ಸಾಗುವಳಿ ಭೂಮಿಯು ಬೆಳ್ಳಾರ, ಬೋರನಕಣಿವೆ, ಅಂಬಾರಪುರ, ಹೊಯ್ಸಳಕಟ್ಟೆ, ದಬ್ಬಗುಂಟೆ, ಮರೆನಡು, ಮತ್ತುಗದಹಳ್ಳಿ ಹಳ್ಳಿಗಳಿಗೆ ಸೇರಿದೆ.
ಆಕರ್ಷಣೆಗಾಗಿ ಲಕ್ಷಾಂತರ ರೂ. ವೆಚ್ಚ : ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಬೋರನಕಣಿವೆ ಜಲಾಶಯ ಸಹ ಒಂದಾಗಿರುವುದರಿಂದ ಪ್ರವಾಸಿ ತಾಣವಾಗಿಸಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಮೆಟ್ಟಿಲುಗಳಿಗೆ ಗ್ರಾೃನೈಟ್, ಪಾರ್ಕಿಂಗ್ ಟೈಲ್ಸ್, ೆನ್ಸಿಂಗ್ ಕಾರ್ಯಗಳು ನಡೆಯುತ್ತಿವೆ.
ರೈತರು ಆತಂಕಪಡುವ ಅಗತ್ಯವಿಲ್ಲ : ಜಲಾಶಯವನ್ನು ಕಲ್ಲಿನಲ್ಲಿ ನಿರ್ಮಿಸಿದ್ದು, ಗೋಡೆಯ ರಕ್ಷಣೆಗಾಗಿ ಇಟ್ಟಿಗೆಯಲ್ಲಿ ಗೋಡೆ ನಿರ್ಮಿಸಿದ್ದಾರೆ. ನೂರಾರು ವರ್ಷಗಳಿಂದ ಇಟ್ಟಿಗೆ ನೀರಿನಲ್ಲಿ ಕರುಗುತ್ತಿದೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದು,್ದ ಖುದ್ದು ಪರಿಶೀಲನೆ ಮಾಡಿದ್ದೇವೆ. ಆದರೆ ಸಣ್ಣ ನೀರಾವರಿ ಇಲಾಖೆಯಿಂದಲೇ ರಿಪೇರಿ ಮಾಡಲು ಬರುವುದಿಲ್ಲ. ಡ್ಯಾಂಗಳ ದುರಸ್ತಿಗೆ ಪ್ರತ್ಯೇಕ ವಿಭಾಗವಿದ್ದು ಅವರಿಗೆ ಪತ್ರ ಬರೆದು ವಿಷಯ ಮುಟ್ಟಿಸಿದ್ದೇವೆ. ಅವರು ಬಂದು ಪರಿಶೀಲನೆ ಮಾಡಿ ದುರಸ್ತಿಯ ಬಗ್ಗೆ ಸಲಹೆ ಕೊಟ್ಟ ನಂತರವಷ್ಟೆ ದುರಸ್ತಿ ಮಾಡಬಹುದಾಗಿದೆ. ಸದ್ಯಕ್ಕೆ ರೈತರು ಆತಂಕಪಡುವ ಅಗತ್ಯವಿಲ್ಲ. ಹೇಮೆ ಹರಿಯುವ ಮೊದಲೇ ದುರಸ್ತಿ ಮಾಡಿಸುತ್ತೇವೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಜೆಇ ಪ್ರಭಾಕರ್.