

ಮಡಿಕೇರಿ:
ಕದ್ದಣಿಯಂಡ ಹರೀಶ್ ಬೋಪಣ್ಣ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಈ ಸಂಬಂಧ ಶುಕ್ರವಾರ ಪತ್ರ ಬರೆದಿರುವ ಅವರು ಕರ್ನಾಟಕದಲ್ಲಿ ಕಳೆದ ೨೫ ವರ್ಷಗಳಿಂದ ಮತ್ತು ಕೊಡಗಿನಲ್ಲಿ ಕಳೆದ ೬ ವರ್ಷಗಳಿಂದ ಪಕ್ಷದ ಅಭಿವೃದ್ಧಿಗಾಗಿ ದುಡಿಯಲಾಗಿದೆ. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಅನೇಕ ಜನಸೇವೆ, ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಪಕ್ಷ ಸಂಘಟನೆ ಮಾಡಲಾಗಿದೆ. ಇದೀಗ ಬೆಂಬಲಿಗರ ಜೊತೆ ಚರ್ಚೆ ಮಾಡಿ ಕೆಲವು ಅನಿವಾರ್ಯ ಕಾರಣಗಳಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಅವರಿಗೆ ಆಪ್ತರಾಗಿದ್ದ ಹರೀಶ್ ಬೋಪಣ್ಣ ಜಿಲ್ಲೆಯಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕಾರಣರಾಗಿದ್ದರು. ಈ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಈಗ ಚುನಾವಣಾ ಹೊಸ್ತಿಲಿನಲ್ಲಿ ಪಕ್ಷ ತೊರೆದಿದ್ದಾರೆ.
ನನಗೆ ಒಳ್ಳೆಯ ಕೆಲಸಗಾರ ಎನ್ನುವ ಹೆಸರಿದೆ. ಜನಸಾಮಾನ್ಯರು ತಮಗೆ ಏನಾದರೂ ಸಹಾಯ ಬೇಕಾದರೆ ನನ್ನ ಬಳಿ ಬರುತ್ತಿದ್ದರು. ಆದರೆ ಈಗಿನ ಸ್ಥಿತಿಯಲ್ಲಿ ಮುಂದೆ ಆ ರೀತಿಯ ಕೆಲಸಗಳು ನನ್ನಿಂದ ಆಗುವುದಕ್ಕೆ ಅನುಕೂಲಕರ ಪರಿಸ್ಥಿತಿ ಇಲ್ಲ. ಹಾಗಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಮುಂದಿನ ನಿರ್ಧಾರ ಸದ್ಯದಲ್ಲೇ ಪ್ರಕಟಿಸುತ್ತೇನೆ.
ಕದ್ದಣಿಯಂಡ ಹರೀಶ್ ಬೋಪಣ್ಣ, ರಾಜೀನಾಮೆ ನೀಡಿರುವ ಕಾಂಗ್ರೆಸ್ ಮುಖಂಡ